
ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ತಲುಪಿದೆ. ಆದಾಗ್ಯೂ, ಗುಂಪು ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದ್ದು, ಅದು ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಇದರ ನಂತರ, ಭಾರತ ತಂಡವು ಮಾರ್ಚ್ 4 ರಂದು ದುಬೈನಲ್ಲಿ ಸೆಮಿಫೈನಲ್ ಪಂದ್ಯವನ್ನು ಆಡಬೇಕಾಗುತ್ತದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ವಾಸ್ತವವಾಗಿ, ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ನಲ್ಲಿರುವ ಬುಮ್ರಾ, ಇದೀಗ ಫಿಟ್ ಆಗಿದ್ದು ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಇದರ ವಿಡಿಯೋವನ್ನು ಬುಮ್ರಾ ಹಂಚಿಕೊಂಡಿದ್ದು, ಸೆಮಿಫೈನಲ್‌ಗೂ ಮುನ್ನ ಟೀಂ ಇಂಡಿಯಾವನ್ನು ಸೇರಿಕೊಳ್ಳುತ್ತಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಬೆನ್ನು ನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು. ರಿಹ್ಯಾಬ್ಗಾಗಿ ಬೆಂಗಳೂರಿನ ಎನ್‌ಸಿಎ ಸೇರಿಕೊಂಡಿದ್ದ ಬುಮ್ರಾ ಪ್ರಸ್ತುತ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಮೈದಾನದಿಂದ ದೂರವಿದ್ದ ಬುಮ್ರಾ ಈಗ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ವೀಡಿಯೊದಲ್ಲಿ ಅವರು ಉತ್ತಮ ಲಯದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ ಮಾರ್ಚ್ 4 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಗೆ ಅವರು ತಂಡವನ್ನು ಕೂಡಿಕೊಳ್ಳುವುದು ಕಷ್ಟಕರವಾಗಿದೆ. ಏಕೆಂದರೆ ಸೆಮೀಸ್ ಪಂದ್ಯ ನಡೆಯಲು ಕೇವಲ 4 ದಿನಗಳು ಮಾತ್ರ ಉಳಿದಿವೆ. ಇದರ ಜೊತೆಗೆ ಬುಮ್ರಾ ಲಭ್ಯತೆಯ ಬಗ್ಗೆ ಬಿಸಿಸಿಐನಿಂದಲೂ ಯಾವುದೇ ಮಾಹಿತಿ ಬಂದಿಲ್ಲ. ವರದಿಯ ಪ್ರಕಾರ, ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್‌ನಿಂದ ಬುಮ್ರಾ ಕ್ರಿಕೆಟ್‌ಗೆ ಮರಳಲಿದ್ದಾರೆ.
ವಾಸ್ತವವಾಗಿ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್ ಸಮಯದಲ್ಲಿ ಬುಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿತು. ಇದರಿಂದಾಗಿ ಅವರು ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆ ಬಳಿಕ ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ 5 ವಾರಗಳ ವಿಶ್ರಾಂತಿ ಪಡೆಯಲು ಸಲಹೆ ನೀಡಿತ್ತು. ಈ ಮೊದಲು ಚಾಂಪಿಯನ್ಸ್ ಟ್ರೋಫಿ ವೇಳೆಗೆ ಬುಮ್ರಾ ಫಿಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಆಗಲಿಲ್ಲ.
ಇದನ್ನೂ ಓದಿ: ಬೌಲಿಂಗ್ ಅಭ್ಯಾಸ ಆರಂಭಿಸಿದ ಜಸ್ಪ್ರೀತ್ ಬುಮ್ರಾ; ವಿಡಿಯೋ ನೋಡಿ
ಆದರೆ, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುತ್ತಿರುವ ವಿಡಿಯೋ ನೋಡಿದ ನಂತರ, ಅಭಿಮಾನಿಗಳಲ್ಲಿ ಸಂತೋಷದ ಅಲೆ ಮೂಡಿದೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಬುಮ್ರಾ ಅವರನ್ನು ಆಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೆಲವರು ಬುಮ್ರಾ, ಸೆಮಿಫೈನಲ್‌ನಲ್ಲಿ ಆಡಲಿ ಎಂದರೆ, ಇನ್ನು ಕೆಲವರು ಫೈನಲ್‌ನಲ್ಲಿ ಆಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ, ಅಭಿಮಾನಿಗಳ ಈ ಬೇಡಿಕೆಯನ್ನು ಈಡೇರಿಸುವುದು ಕಷ್ಟಕರ. ಆದರೆ ಬುಮ್ರಾ ಶೀಘ್ರದಲ್ಲೇ ಉತ್ತಮ ಪುನರಾಗಮನ ಮಾಡುವ ನಿರೀಕ್ಷೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ