Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI Awards: ಬುಮ್ರಾ, ಸ್ಮೃತಿಗೆ ವರ್ಷದ ಅತ್ಯುತ್ತಮ ಕ್ರಿಕೆಟರ್ ಗೌರವ; ಕ್ರಿಕೆಟ್ ದೇವರಿಗೆ ಜೀವಮಾನ ಸಾಧನೆ ಪ್ರಶಸ್ತಿ

BCCI Naman Awards: ಬಿಸಿಸಿಐ ತನ್ನ ವಾರ್ಷಿಕ ನಮನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಮೃತಿ ಮಂಧಾನ ಅವರಿಗೆ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಿದೆ. ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.

BCCI Awards: ಬುಮ್ರಾ, ಸ್ಮೃತಿಗೆ ವರ್ಷದ ಅತ್ಯುತ್ತಮ ಕ್ರಿಕೆಟರ್ ಗೌರವ; ಕ್ರಿಕೆಟ್ ದೇವರಿಗೆ ಜೀವಮಾನ ಸಾಧನೆ ಪ್ರಶಸ್ತಿ
ಬಿಸಿಸಿಐ ಪ್ರಶಸ್ತಿ
Follow us
ಪೃಥ್ವಿಶಂಕರ
|

Updated on:Feb 01, 2025 | 9:24 PM

ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರಿಗೆ ಬಿಸಿಸಿಐ ವರ್ಷದ ಅತ್ಯುತ್ತಮ ಕ್ರಿಕೆಟರ್ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂಬೈನಲ್ಲಿ ನಡೆದ ಬಿಸಿಸಿಐ ವಾರ್ಷಿಕ ‘ನಮನ್ ಅವಾರ್ಡ್ಸ್’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಇಬ್ಬರು ಸ್ಟಾರ್ ಪ್ಲೇಯರ್​ಗೆ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇವರಿಬ್ಬರನ್ನು ಹೊರತುಪಡಿಸಿ ಬಿಸಿಸಿಐ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​ಗೂ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರತಿ ವರ್ಷದಂತೆ, ಫೆಬ್ರವರಿ 1 ರ ಶನಿವಾರದಂದು ಬಿಸಿಸಿಐ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಮುಂಬೈನ ಪಂಚತಾರಾ ಹೊಟೇಲ್‌ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಮಾತ್ರವಲ್ಲದೆ, ದೇಶಿ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ ಆಟಗಾರರಿಗೂ ವಿಶೇಷ ಪುರಸ್ಕಾರ ನೀಡಲಾಯಿತು.

ಬುಮ್ರಾ-ಮಂಧಾನಗೆ ವರ್ಷದ ಗೌರವ

ವಾಸ್ತವವಾಗಿ ಬಿಸಿಸಿಐ, 2007 ರಿಂದ ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಮಾಜಿ ಲೆಜೆಂಡರಿ ಕ್ರಿಕೆಟಿಗ ಪಾಲಿ ಉಮ್ರಿಗರ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿತು. ಅದರಂತೆ ಮೊದಲ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದರು. ಇದೀಗ 2023-24 ನೇ ಸಾಲಿನಲ್ಲಿ ಮೂರು ಮಾದರಿಯ ಕ್ರಿಕೆಟ್​ನಲ್ಲೂ ಅಮೋಘ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬುಮ್ರಾಗೆ ಇದು ಎರಡನೇ ಬಾರಿಗೆ ಸಂದ ಗೌರವವಾಗಿದೆ. ಇದಕ್ಕೂ ಮುನ್ನ ಬುಮ್ರಾ 2018-19ನೇ ಸಾಲಿನಲ್ಲೂ ಈ ಪ್ರಶಸ್ತಿಯನ್ನು ಪಡೆದಿದ್ದರು.

ಬುಮ್ರಾ ಅಲ್ಲದೆ, ಭಾರತ ಮಹಿಳಾ ತಂಡದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಕ್ಕೂ ಮೊದಲು, ಅವರು 2017-18, 2020-21 ಮತ್ತು 2021-22 ಸೀಸನ್‌ಗಳಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಸಚಿನ್ ಮತ್ತು ಅಶ್ವಿನ್​ಗೆ ವಿಶೇಷ ಗೌರವ

ಇದರ ಜೊತೆಗೆ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ರಿಸ್ಬೇನ್ ಟೆಸ್ಟ್ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅನುಭವಿ ಸ್ಪಿನ್ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕರ್ನಲ್ ಸಿ.ಕೆ.ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಪಡೆದರು. ಬಿಸಿಸಿಐನ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಐಸಿಸಿ ಅಧ್ಯಕ್ಷ ಜೈ ಶಾ ಅವರು ಸಚಿನ್‌ಗೆ ಈ ವಿಶೇಷ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Sat, 1 February 25