
ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯ ಬಳಿಕ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರೆಂಬ ಪ್ರಶ್ನೆಗೆ ಕೇಳಿಬಂದ ಮೊದಲ ಉತ್ತರ ಜಸ್ಪ್ರೀತ್ ಬುಮ್ರಾ. ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರಿಂದ ಬುಮ್ರಾಗೆ ಟೆಸ್ಟ್ ತಂಡದ ಕ್ಯಾಪ್ಟನ್ಸಿ ಒಲಿಯುವುದು ಖಚಿತ ಎನ್ನಲಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡವನ್ನು ಘೋಷಿಸಿದಾಗ ಶುಭ್ಮನ್ ಗಿಲ್ ಅವರಿಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿತ್ತು. ಇದರ ಬೆನ್ನಲ್ಲೇ ಬುಮ್ರಾ ಅವರನ್ನು ಕಡೆಗಣಿಸಿರುವ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ಪ್ರಶ್ನೆಗಳಿಗೆ ಇದೀಗ ಜಸ್ಪ್ರೀತ್ ಬುಮ್ರಾ ಅವರೇ ಉತ್ತರ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಿಮಿತ್ತ ಇಂಗ್ಲಿಷ್ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಜಸ್ಪ್ರೀತ್ ಬುಮ್ರಾ, ನಾನೇ ನಾಯಕತ್ವ ಬೇಡ ಎಂದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾಗುವ ಮೊದಲು, ಐಪಿಎಲ್ ಸಮಯದಲ್ಲಿ ನಾನು ಬಿಸಿಸಿಐ ಜೊತೆ ಮಾತನಾಡಿದ್ದೆ. ಅಲ್ಲದೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿನ ಕೆಲಸದ ಹೊರೆಯ ಬಗ್ಗೆ ಚರ್ಚಿಸಿದ್ದೆ.
ನನಗೆ ಬೆನ್ನು ನೋವಿನ ಸಮಸ್ಯೆಯಿರುವ ಕಾರಣ ಅದರ ಬಗ್ಗೆ ನಾನು ಎಚ್ಚರಿವಹಿಸಬೇಕಿದೆ. ಹೀಗಾಗಿ ಈ ಬಗ್ಗೆ ನಾನು ಬಿಸಿಸಿಐನ ಪ್ರಮುಖ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಇದೇ ವೇಳೆ ನಾನು ಮುಂಬರುವ ಸರಣಿಗೆ ನನ್ನನ್ನು ನಾಯಕನಾಗಿ ಪರಿಗಣಿಸಬಾರದು ಎಂದು ತಿಳಿಸಿದ್ದೆ. ಇದಕ್ಕೆ ಮುಖ್ಯ ಕಾರಣ ನನ್ನ ಕೆಲಸದ ಹೊರೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ನಾನು ಕಣಕ್ಕಿಳಿಯುವುದು ಖಚಿತವಿಲ್ಲ.
ನಾನು ಈ ಸರಣಿಯಲ್ಲಿ 3 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದು, ಭಾರತ ತಂಡವನ್ನು ಮುನ್ನಡೆಸುವುದು ಸರಿಯಾದ ನಿರ್ಧಾರವಲ್ಲ. ಇದು ನ್ಯಾಯಯುತವಲ್ಲ ಎಂಬುದು ನನ್ನ ಭಾವನೆ. ನಾನು ಯಾವಾಗಲೂ ತಂಡ ಮೊದಲು ಎಂದು ಪರಿಗಣಿಸುವ ಆಟಗಾರ. ಹೀಗಾಗಿ ನನಗೆ ನಾಯಕತ್ವಕ್ಕಿಂತ ತಂಡದ ಹಿತ ಮುಖ್ಯ, ಇದೇ ಕಾರಣದಿಂದಾಗಿ ನಾನು ನಾಯಕತ್ವ ಬೇಡ ಎಂದಿದ್ದೆ ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 13 ಭರ್ಜರಿ ಸಿಕ್ಸ್… ಮ್ಯಾಕ್ಸ್ವೆಲ್ ಬ್ಯಾಟ್ನಿಂದ ತೂಫಾನ್ ಸೆಂಚುರಿ
ಅಂದಹಾಗೆ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ಆ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಂಡರೂ ಬೆನ್ನಿನ ಭಾಗಕ್ಕೆ ಹೆಚ್ಚಿನ ಒತ್ತಡ ಹಾಕದಂತೆ ವೈದ್ಯರು ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳಲ್ಲೂ ಕಣಕ್ಕಿಳಿಯುವ ಸಾಧ್ಯತೆಯಿಲ್ಲ.
Published On - 8:53 am, Wed, 18 June 25