IND vs ENG: ಜಸ್​ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನಾಡುವುದು ಡೌಟ್

India Squad For England Test Series: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಸರಣಿಯ ನಡುವೆ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯಲಿದ್ದಾರೆ.

IND vs ENG: ಜಸ್​ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನಾಡುವುದು ಡೌಟ್
Jasprit Bumrah

Updated on: May 25, 2025 | 1:13 PM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದ ಘೋಷಣೆಯಾಗಿದೆ. ನಿರೀಕ್ಷೆಯಂತೆ ಟೀಮ್ ಇಂಡಿಯಾಗೆ (Team India) ಹೊಸ ನಾಯಕನಾಗಿ ಶುಭ್​ಮನ್ ಗಿಲ್ ಆಯ್ಕೆಯಾಗಿದ್ದಾರೆ. ಆದರೆ ಈ ಹಿಂದೆ ಉಪನಾಯಕನಾಗಿ ಜಸ್​ಪ್ರೀತ್ ಬುಮ್ರಾ ಅವರನ್ನು ವೈಸ್ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲಾಗಿದೆ. ಬದಲಿಗೆ ರಿಷಭ್ ಪಂತ್​ಗೆ ಉಪನಾಯಕತ್ವ ನೀಡಲಾಗಿದೆ. ಈ ಹಿಂದೆ ರೋಹಿತ್ ಶರ್ಮಾ ಬಳಿಕ ಬುಮ್ರಾ ಅವರಿಗೆ ಟೀಮ್ ಇಂಡಿಯಾ ನಾಯಕತ್ವ ಒಲಿಯಲಿದೆ ಎನ್ನಲಾಗಿತ್ತು.

ಆದರೀಗ ಜಸ್​ಪ್ರೀತ್ ಬುಮ್ರಾ ಅವರನ್ನು ಎಲ್ಲಾ ರೀತಿಯ ನಾಯಕತ್ವದಿಂದಲೂ ಕೆಳಗಿಳಿಸಲಾಗಿದೆ. ಬಿಸಿಸಿಐ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ ಅವರ ಕೆಲಸದ ಒತ್ತಡ. ಅಂದರೆ ಟೀಮ್ ಇಂಡಿಯಾದ ಪ್ರಮುಖ ವೇಗಿಯಾಗಿರುವ ಬುಮ್ರಾ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆಯಿಲ್ಲ. ಈ ಹಿಂದೆ ಸತತ ಪಂದ್ಯಗಳಿಂದಾಗಿ ಅವರು ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದರು.

ಹೀಗಾಗಿ ಬುಮ್ರಾ ಅವರು ಮತ್ತೊಮ್ಮೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದರೆ,  ಅದು ಅವರ ಟೆಸ್ಟ್ ವೃತ್ತಿಜೀವನದ ಗಂಭೀರ ಪರಿಣಾಮ ಬೀರಬಹುದು. ಇದನ್ನು ತಪ್ಪಿಸಲು ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯ ನಡುವೆ ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಇದನ್ನೇ ಪ್ರಸ್ತಾಪಿಸಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಜಸ್​ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದಿದ್ದಾರೆ. ಅಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 5 ಪಂದ್ಯಗಳನ್ನಾಡಲಿದೆ. ಈ ವೇಳೆ ಅವರು 2 ಪಂದ್ಯಗಳಿಂದ ಹೊರಗುಳಿಯಬಹುದು.

ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಜಸ್​ಪ್ರೀತ್ ಬುಮ್ರಾ ಮೂರನೇ ಪಂದ್ಯದ ವೇಳೆ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಇಲ್ಲದಿದ್ದರೆ ಅವರು ನಾಲ್ಕನೇ ಪಂದ್ಯಕ್ಕೆ ಅಲಭ್ಯರಾಗಬಹುದು.

ಇತ್ತ ಜಸ್​ಪ್ರೀತ್ ಬುಮ್ರಾ ಅಲಭ್ಯತೆಯ ನಡುವೆ ಟೀಮ್ ಇಂಡಿಯಾ ಮೊಹಮ್ಮದ್ ಸಿರಾಜ್ ಅವರನ್ನು ಆಶ್ರಯಿಸಲಿದೆ. ಏಕೆಂದರೆ ಫಿಟ್​ನೆಸ್ ಸಮಸ್ಯೆಯ ಕಾರಣ ಮೊಹಮ್ಮದ್ ಶಮಿ ಈ ಸರಣಿಗೆ ಆಯ್ಕೆಯಾಗಿಲ್ಲ. ಅತ್ತ ಇಂಗ್ಲೆಂಡ್​ನಲ್ಲಿ ಆಡಿದ ಅನುಭವ ಹೊಂದಿರುವುದು ಮೊಹಮ್ಮದ್ ಸಿರಾಜ್​ಗೆ ಮಾತ್ರ.

ಹೀಗಾಗಿ ಜಸ್​ಪ್ರೀತ್ ಬುಮ್ರಾ ಕೆಲ ಪಂದ್ಯಗಳಿಂದ ಹೊರಗುಳಿದರೆ, ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಬೌಲಿಂಗ್ ಲೈನಪ್​ ಅನ್ನು ಮುನ್ನಡೆಸಲಿದ್ದಾರೆ. ಸಿರಾಜ್ ಜೊತೆ ಪ್ರಸಿದ್ಧ್ ಕೃಷ್ಣ ಹಾಗೂ ಅರ್ಷದೀಪ್ ಸಿಂಗ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: IPL 2025: ಕಣಕ್ಕಿಳಿಯದಿದ್ರು ರಜತ್ ಪಾಟಿದಾರ್​ಗೆ 24 ಲಕ್ಷ ರೂ. ದಂಡ

ಭಾರತ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್.