ಬಿಸಿಸಿಐ ಕಾರ್ಯದರ್ಶಿಯಾಗಿ ಭಾರತೀಯ ಕ್ರಿಕೆಟ್ ಅನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದ ಜಯ್ ಶಾ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಜಯ್ ಶಾ ಇಂದಿನಿಂದ ಐಸಿಸಿ ಅಧ್ಯಕ್ಷರಾಗಿ ಅಧಿಕಾರಾವಧಿ ಆರಂಭಿಸಿದ್ದಾರೆ. ಇದರೊಂದಿಗೆ ಐಸಿಸಿ ಗದ್ದಿಗೆ ಏರಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೂ ಜಯ್ ಶಾ ಪಾತ್ರರಾಗಿದ್ದಾರೆ. ಇದಲ್ಲದೆ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ 35 ವರ್ಷ ಜಯ್ ಶಾ, ಈ ಹುದ್ದೆಗೇರಿದ 5ನೇ ಭಾರತೀಯ ಎನಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಈಗ ಈ ಪಂದ್ಯಾವಳಿಯ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಜಯ್ ಶಾ ಪ್ರಮುಖ ಪಾತ್ರ ವಹಿಸಲಿದ್ದಾರೆ.
2019ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೇರಿದ್ದ ಜಯ್ ಶಾ, ಬಿಸಿಸಿಐನಲ್ಲಿ ಸುಮಾರು 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ, ಅವರು ಜನವರಿ 2021 ರಿಂದ ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ಈಗ ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಈ ಹಿಂದೆ ಸತತ ಎರಡು ಆವೃತ್ತಿಗಳಿಗೆ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಅವರ ಸ್ಥಾನವನ್ನು ಇನ್ನು ಮುಂದೆ ಜಯ್ ಶಾ ತುಂಬಲಿದ್ದಾರೆ.
A new chapter of global cricket begins today with Jay Shah starting his tenure as ICC Chair.
Details: https://t.co/y8RKJEvXvl pic.twitter.com/Fse4qrRS7a
— ICC (@ICC) December 1, 2024
ಜಯ್ ಶಾ ಅವರ ಅಧಿಕಾರಾವಧಿಯಲ್ಲಿ ಮೊದಲ ಐಸಿಸಿ ಪಂದ್ಯಾವಳಿ ಚಾಂಪಿಯನ್ಸ್ ಟ್ರೋಫಿ ಆಗಿದ್ದು, ಆರಂಭದಲ್ಲೇ ಜಯ್ ಶಾಗೆ ಸವಾಲಿನ ಕೆಲಸ ಎದುರಾಗಿದೆ. ಏಕೆಂದರೆ ಈ ಪಂದ್ಯಾವಳಿಯ ಆಯೋಜಕತ್ವಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಅಲ್ಲದೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪ್ರತಿಷ್ಠೆಯ ಹೋರಾಟವೇ ಈ ಟೂರ್ನಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಇದೀಗ ಐಸಿಸಿ ಹುದ್ದೆಗೇರಿರುವ ಜಯ್ ಶಾ ಈ ವಿವಾದವನ್ನು ಹೇಗೆ ಪರಿಹರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಅಧಿಕೃತವಾಗಿ ಐಸಿಸಿ ಅಧ್ಯಕ್ಷರಾದ ಬಳಿಕ ಮಾತನಾಡಿದ ಜಯ್ ಶಾ, 2028 ರಲ್ಲಿ ನಡೆಯಲ್ಲಿರುವ ಲಾಸ್ ಏಂಜಲೀಸ್ ಒಲಂಪಿಕ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮತ್ತು ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು. ಜೊತೆಗೆ ಐಸಿಸಿ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಳ್ಳಲು ನನಗೆ ಗೌರವವಿದೆ ಮತ್ತು ಐಸಿಸಿ ನಿರ್ದೇಶಕರ ಮಂಡಳಿ ಮತ್ತು ಸದಸ್ಯರ ಬೆಂಬಲ ಮತ್ತು ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಕ್ರಿಕೆಟ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚು ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ಗೆ ಅಪಾರ ಕ್ರೇಜ್ ಇದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಆಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಐಸಿಸಿ ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Sun, 1 December 24