ಆಸ್ಟ್ರೇಲಿಯಾಗೆ ಹಾರಲು ಮೊಹಮ್ಮದ್ ಶಮಿ ರೆಡಿ…ಆದರೆ
Mohammed Shami: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಕಳೆದ ಒಂದು ವರ್ಷದಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಈ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.
Updated on: Dec 01, 2024 | 1:26 PM

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಲು ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗಲಿದೆ ಎಂದು ವರದಿಯಾಗಿದೆ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡುವ ಮೂಲಕ ತಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿರುವ ಶಮಿಯ ಫಿಟ್ನೆಸ್ ಮೇಲೆ ಇದೀಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಕೆಲ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

ಈ ಅಧಿಕಾರಿಗಳಿಂದ ಗ್ರೀನ್ ಸಿಗ್ನಲ್ ಸಿಕ್ಕರೆ, ಮೊಹಮ್ಮದ್ ಶಮಿ ಅವರನ್ನು ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ಕಳುಹಿಸಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದರಂತೆ ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಕೆಲ ಪಂದ್ಯಗಳು ಮೊಹಮ್ಮದ್ ಶಮಿ ಪಾಲಿಗೆ ಅಗ್ನಿಪರೀಕ್ಷೆ ಎನ್ನಬಹುದು.

ಏಕೆಂದರೆ ಮೊಹಮ್ಮದ್ ಶಮಿ ಆಡಲಿರುವ ಮುಂದಿನ ಮ್ಯಾಚ್ಗಳ ಮೇಲೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೆಲವು ಅಧಿಕಾರಿಗಳು ನಿಗಾಯಿಡಲಿದ್ದಾರೆ. ಅಲ್ಲದೆ ಈ ವೇಳೆ ಅವರ ಫಿಟ್ನೆಸ್ ಕಾರ್ಯಕ್ಷಮತೆಯನ್ನು ಪರಿಶೀಲಿಸಲಿದ್ದು, ಇದಾದ ಬಳಿಕ ಅವರನ್ನು ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಬೇಕಾ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ.

ಈಗಾಗಲೇ ಬಿಸಿಸಿಐ, ಎನ್ಸಿಎ ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್, ತರಬೇತುದಾರ ನಿಶಾಂತ್ ಬಾರ್ದುಲೆ ಮತ್ತು ಆಯ್ಕೆಗಾರ ಎಸ್‌ಎಸ್ ದಾಸ್ ಅವರನ್ನು ಸೌರಾಷ್ಟ್ರಕ್ಕೆ ಕಳುಹಿಸಿದೆ. ಡಿಸೆಂಬರ್ 3 ರಂದು ಬಂಗಾಳ ಹಾಗೂ ಬಿಹಾರ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದ ವೇಳೆ ಎನ್ಸಿಎ ಅಧಿಕಾರಿಗಳು ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಮೇಲೆ ನಿಗಾಯಿಡಲಿದ್ದಾರೆ.

ಒಂದು ವೇಳೆ ಮುಂದಿನ ಎರಡು-ಮೂರು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಯಾವುದೇ ಸಮಸ್ಯೆಯಿಲ್ಲದೆ ಬೌಲಿಂಗ್ ಮಾಡಲು ಯಶಸ್ವಿಯಾದರೆ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಅದರಂತೆ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ವೇಳೆ ಮೊಹಮ್ಮದ್ ಶಮಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
