ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ರಾಂಚಿಯಲ್ಲಿರುವ ತಮ್ಮ ಹಳೆಯ ಮನೆಯ ವಿಷಯದಿಂದ ಎಂಬುದಷ್ಟೇ ವ್ಯತ್ಯಾಸ. ಮಹೇಂದ್ರ ಸಿಂಗ್ ಧೋನಿ ಅವರ ಸಾಧನೆಯನ್ನು ಪರಿಗಣಿಸಿ ಜಾರ್ಖಂಡ್ ಸರ್ಕಾರ ಈ ಹಿಂದೆ ಅವರಿಗೆ ರಾಂಚಿಯಲ್ಲಿ 10 ಸಾವಿರ ಚದರ ಅಡಿ ಜಾಗ ನೀಡಿತ್ತು.
ಈ ಜಾಗದಲ್ಲಿ ಮಹೇಂದ್ರ ಸಿಂಗ್ ಧೋನಿ ಐಷಾರಾಮಿ ಮನೆ ನಿರ್ಮಿಸಿದ್ದರು. ಇಷ್ಟೇ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈ ಮನೆಯನ್ನು ಧೋನಿ ವಾಣಿಜ್ಯ ಉದ್ದೇಶದ ಬಳಕೆಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಂಚಿಯ ಹರ್ಮು ರಸ್ತೆಯಲ್ಲಿರುವ ಧೋನಿಯ ಈ ಮನೆಯಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಹೌಸಿಂಗ್ ಬೋರ್ಡ್ಗೆ ದೂರು ದಾಖಲಿಸಲಾಗಿದೆ. ಹೀಗಾಗಿ ಇದೀಗ ಜಾರ್ಖಡ್ ಹೌಸಿಂಗ್ ಬೋರ್ಡ್ ಧೋನಿ ಕಡೆಯಿಂದ ಸ್ಪಷ್ಟನೆ ಕೇಳಿದೆ.
ಜಾರ್ಖಂಡ್ ಹೌಸಿಂಗ್ ಬೋರ್ಡ್ ನಿಯಮಗಳ ಪ್ರಕಾರ, ವಸತಿ ಪ್ಲಾಟ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಯಾವುದೇ ಪ್ರಕರಣದಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದರೆ ಅದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ.
ಇದೀಗ ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಜಾರ್ಖಂಡ್ ಹೌಸಿಂಗ್ ಬೋರ್ಡ್ನ ಅಧ್ಯಕ್ಷ ಸಂಜಯ್ ಲಾಲ್ ಪಾಸ್ವಾನ್ ಹೇಳಿದ್ದಾರೆ.
ಅಂದಹಾಗೆ ಧೋನಿಯ ಈ ಮನೆಯು ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಈ ಮನೆಯ ಮೇಲ್ಛಾವಣಿಯಲ್ಲಿ ಧೋನಿ ಈಜುಕೊಳವನ್ನು ನಿರ್ಮಿಸಿದ್ದರು. ಈ ಬಗ್ಗೆ 2007 ರಲ್ಲಿ ದೂರು ನೀಡಲಾಗಿತ್ತು.
ಇನ್ನು 2016ರಲ್ಲಿ ನಗರದಲ್ಲಿ ನೀರಿನ ಅಭಾವ ಉಂಟಾದಾಗ ಧೋನಿ ತನ್ನ ಈಜುಕೊಳಕ್ಕೆ ಪ್ರತಿದಿನ 15 ಸಾವಿರ ಲೀಟರ್ ನೀರು ವ್ಯಯಿಸುತ್ತಿದ್ದಾರೆ. ಇದರಿಂದ ತಮ್ಮ ಮನೆಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂದು ಆರೋಪಿಸಿದ್ದರು.
ಇದನ್ನೂ ಓದಿ: 468ನೇ ಆಟಗಾರ… ಟೀಮ್ ಇಂಡಿಯಾ ವಿರುದ್ಧ 19ರ ಹರೆಯದ ಸ್ಪೋಟಕ ದಾಂಡಿಗ ಎಂಟ್ರಿ
ಇದೀಗ ಸರ್ಕಾರ ನೀಡಿದ ಜಾಗವನ್ನು ಧೋನಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಮುಂದಾಗಿ ಮತ್ತೊಮ್ಮೆ ಸುದ್ದಿ ಸೃಷ್ಟಿಸಿದ್ದಾರೆ. ಸದ್ಯ ಈ ಮನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ವಾಸಿಸುತ್ತಿಲ್ಲ. ಬದಲಾಗಿ ಕಳೆದ ಹಲವಾರು ವರ್ಷಗಳಿಂದ ಸಿಮಾಲಿಯಾ ರಿಂಗ್ ರೋಡ್‌ನಲ್ಲಿರುವ ತಮ್ಮ ಬೃಹತ್ ಫಾರ್ಮ್ ಹೌಸ್‌ನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ.