WI vs ENG: ರೂಟ್-ಸ್ಟೋಕ್ಸ್ ಶತಕದ ವೈಭವ: 507 ರನ್ಗೆ ಇಂಗ್ಲೆಂಡ್ ಡಿಕ್ಲೇರ್: ವಿಂಡೀಸ್ಗೆ ಆರಂಭಿಕ ಆಘಾತ
West Indies vs England 2nd Test: ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 507 ರನ್ಗೆ ಡಿಕ್ಲೇರ್ ಘೋಷಿಸಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 71 ರನ್ ಕಲೆಹಾಕಿದೆ.
ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ (West Indies vs England) ವಿರುದ್ಧದ ಮೊದಲ ಟೆಸ್ಟ್ ಅನ್ನು ಡ್ರಾ ಮಾಡಿಕೊಂಡಿದ್ದರೆ, ದ್ವಿತೀಯ ಟೆಸ್ಟ್ನಲ್ಲಿ ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಬಾರ್ಬಡೊಸ್ನ ಕೆನ್ಸಿಂಗ್ಟಾನ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (Joe Root) ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಅವರ ಆಕರ್ಷಕ ಶತಕದ ನೆರವಿನಿಂದ ಆಂಗ್ಲರು ಬೃಹತ್ ಮೊತ್ತ ಕಲೆಹಾಕಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಎರಡನೇ ದಿನವೂ ಬೊಂಬಾಟ್ ಬ್ಯಾಟಿಂಗ್ ನಡೆಸಿತು. ಅದರಲ್ಲೂ ರೂಟ್ 153 ರನ್ ಸಿಡಿಸಿದರೆ, ಬೆನ್ ಸ್ಟೋಕ್ಸ್ 120 ರನ್ ಚಚ್ಚಿದರು. ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 507 ರನ್ಗೆ ಡಿಕ್ಲೇರ್ ಘೋಷಿಸಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 71 ರನ್ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭದಲ್ಲೇ ಕೇವಲ 4 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಜ್ಯಾಕ್ ಕ್ರೋಲೆ ಖಾತೆ ತೆರೆಯದೆ ಜೇಡನ್ ಸೀಲ್ಸ್ ಬೌಲಿಂಗ್ನಲ್ಲಿ ಔಟಾದರು. ಎರಡನೇ ವಿಕೆಟ್ಗೆ ನಾಯಕ ರೂಟ್ ಜೊತೆಯಾದ ಅಲೆಕ್ಸ್ ಲೀಸ್ 76 ರನ್ಗಳ ಕಾಣಿಕೆ ನೀಡಿದರು. ಲೀಸ್ 138 ಎಸೆತಗಳಲ್ಲಿ 30 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಹೀಗೆ 100 ರನ್ಗೂ ಮೊದಲೇ 2 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ಗೆ ನಾಯಕನ ಜೊತೆ ಡೆನಿಯಲ್ ಲಾರೆನ್ಸ್ ಇನ್ನಿಂಗ್ಸ್ ಕಟ್ಟಿದರು. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ ತಂಡಕ್ಕೆ ಆಧಾರವಾಗಿ ನಿಂತಿತು. ಬರೋಬ್ಬರಿ 164 ರನ್ಗಳ ಜೊತೆಯಾಟ ಆಡಿದ ಇವರಿಬ್ಬರು ತಂಡದ ಮೊತ್ತವನ್ನು 250ರ ಅಂಚಿಗೆ ತಂದಿಟ್ಟರು. ಶತಕದ ಅಂಚಿನಲ್ಲಿ ಎಡವಿದ ಲಾರೆನ್ಸ್ 150 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ನೊಂದಿಗೆ 91 ರನ್ ಗಳಿಸಿ ಜೇಸನ್ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು.
ಹೀಗೆ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 89.5 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 244 ರನ್ ಬಾರಿಸಿತ್ತು. ರೂಟ್ 246 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 119 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ದಿನ ಬೆನ್ ಸ್ಟೋಕ್ಸ್ ಜೊತೆಯಾದ ರೂಟ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಸ್ಟೋಕ್ಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ರೂಟ್ 316 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ 153 ರನ್ ಬಾರಿಸಿ ಔಟಾದರು.
ಸ್ಟೋಕ್ಸ್ ಕೇವಲ 128 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ನೊಂದಿಗೆ 120 ರನ್ ಚಚ್ಚಿದರು. ಬಳಿಕ ಬಂದ ಬ್ಯಾಟರ್ಗಳ ಪೈಕಿ ಕ್ರಿಸ್ ವೋಕ್ಸ್ 41 ಹಾಗೂ ಬೆನ್ ಫಾಕ್ಸ್ 33 ರನ್ ಗಳಿಸಿದರು. 150.5 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 507 ರನ್ ಗಳಿಸಿದ್ದಾಗ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿತು. ವೆಸ್ಟ್ ಇಂಡೀಸ್ ಪರ ವೀರಸ್ವಾಮಿ ಪೆರುಮಾಲ್ 3 ವಿಕೆಟ್ ಕಿತ್ತರೆ, ಕೇಮ್ ರೋಚ್ 2, ಜೇಡನ್ ಸೀಲ್ಸ್, ಅಲ್ಜೆರಿ ಜೋಸೆಫ್, ಬ್ರಾಥ್ವೈಟ್ ಹಾಗೂ ಜೇಸನ್ ಹೋಲ್ಡರ್ ತಲಾ 1 ವಿಕೆಟ್ ಕಿತ್ತಿರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಎರಡನೇ ಓವರ್ನಲ್ಲೇ ಜಾನ್ ಚಾಂಪ್ಬೆಲ್(4) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್ಗೆ ಜೊತೆಯಾಗಿರುವ ನಾಯಕ ಬ್ರಾಥ್ವೈಟ್(28) ಹಾಗೂ ಶಮರ್ ಬ್ರೋಕ್ಸ್(31) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಎರಡನೇ ದಿನದಾಟದ ಅಂತ್ಯಕ್ಕೆ 27 ಓವರ್ನಲ್ಲಿ 1 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿದೆ.
IPL 2022: ಸದ್ದಿಲ್ಲದೆ ಐಪಿಎಲ್ 2022ಕ್ಕೆ ಎಂಟ್ರಿ ಕೊಟ್ಟ ಅಪಾಯಕಾರಿ ಆಟಗಾರ: ಯಾರು ಗೊತ್ತೇ?