ಅಂಟಿಗುವಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ (Jos Buttler) ವಿಶೇಷ ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಇಂಗ್ಲೆಂಡ್ನ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಅನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಕೇವಲ 23 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ಗಳು ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಶಾಯ್ ಹೋಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. 68 ಎಸೆತಗಳಲ್ಲಿ 68 ರನ್ ಬಾರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇನ್ನು ನಾಯಕನಿಗೆ ಉತ್ತಮ ಸಾಥ್ ನೀಡಿದ ಎಡಗೈ ದಾಂಡಿಗ ಶಾರ್ಫೆನ್ ರುದರ್ಫೋರ್ಡ್ 80 ಎಸೆತಗಳಲ್ಲಿ 63 ರನ್ಗಳ ಕೊಡುಗೆ ನೀಡಿದರು. ಆದರೆ ಶಾಯ್ ಹೋಪ್ ಹಾಗೂ ರುದರ್ಫೋರ್ಡ್ ಔಟಾಗುತ್ತಿದ್ದಂತೆ ಮತ್ತೆ ಕುಸಿತಕ್ಕೊಳಗಾದ ವೆಸ್ಟ್ ಇಂಡೀಸ್ ತಂಡವು 39.4 ಓವರ್ಗಳಲ್ಲಿ 202 ರನ್ಗಳಿಸಿ ಆಲೌಟ್ ಆಯಿತು.
203 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ವಿಲ್ ಜಾಕ್ಸ್ (73) ಅರ್ಧಶತಕ ಬಾರಿಸಿ ಮಿಂಚಿದರು. ಆ ಬಳಿಕ ಬಂದ ಹ್ಯಾರಿ ಬ್ರೂಕ್ 43 ರನ್ ಬಾರಿಸಿದರೆ, ನಾಯಕ ಜೋಸ್ ಬಟ್ಲರ್ ಅಜೇಯ 58 ರನ್ ಸಿಡಿಸಿದರು. ಈ ಮೂಲಕ 32.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ಗಳಿಸಿ ಇಂಗ್ಲೆಂಡ್ ಜಯಭೇರಿ ಬಾರಿಸಿತು.
ವಿಶೇಷ ಎಂದರೆ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಜೋಸ್ ಬಟ್ಲರ್ ಏಕದಿನ ಕ್ರಿಕೆಟ್ನಲ್ಲಿ 5000 ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಇಂಗ್ಲೆಂಡ್ನ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇಯಾನ್ ಮೊರ್ಗನ್ ಅಗ್ರಸ್ಥಾನದಲ್ಲಿದ್ದಾರೆ. ಮೋರ್ಗನ್ 6957 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, ಜೋ ರೂಟ್ (6522), ಇಯಾನ್ ಬೆಲ್ (5416), ಪಾಲ್ ಕಾಲಿಂಗ್‌ವುಡ್ (5092) ನಂತರದ ಸ್ಥಾನಗಳಲ್ಲಿದ್ದಾರೆ. ಇದೀಗ ಈ ಪಟ್ಟಿಗೆ ಐದನೇ ಬ್ಯಾಟರ್ ಆಗಿ ಜೋಸ್ ಬಟ್ಲರ್ (5022) ಎಂಟ್ರಿ ಕೊಟ್ಟಿದ್ದಾರೆ.
ಈ ಬಾರಿಯ ವಿಶ್ವಕಪ್ನಲ್ಲಿ ಜೋಸ್ ಬಟ್ಲರ್ ಕಳಪೆ ಫಾರ್ಮ್ನಿಂದ ಬಳಲಿದ್ದರು. 9 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಬಟ್ಲರ್ ಕಲೆಹಾಕಿದ ಗರಿಷ್ಠ ಸ್ಕೋರ್ 43 ರನ್ಗಳು. ಅಂದರೆ 8 ಪಂದ್ಯಗಳಲ್ಲಿ 30ರ ಗಡಿದಾಟಲು ಕೂಡ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: IPL 2024: 3 ತಂಡಗಳಿಗೆ ಹೊಸ ನಾಯಕ..!
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಜೋಸ್ ಬಟ್ಲರ್ ಅವರ ಸ್ಕೋರ್‌ಗಳು ಹೀಗಿವೆ- 43(42), 20(10), 9(18), 15(7), 8(6), 10(23), 1(7), 5(11), ಮತ್ತು 27 (18). ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಮತ್ತೆ ಫಾರ್ಮ್ಗೆ ಮರಳುವ ಸೂಚನೆ ನೀಡಿದ್ದಾರೆ.