PAK vs SA: ಆಫ್ರಿಕಾ ಬೌಲರ್ಗಳ ಅಬ್ಬರದ ಬ್ಯಾಟಿಂಗ್ಗೆ ಕಕ್ಕಾಬಿಕ್ಕಿಯಾದ ಪಾಕಿಸ್ತಾನ
Pakistan vs South Africa Test: ರಾವಲ್ಪಿಂಡಿ ಟೆಸ್ಟ್‌ನಲ್ಲಿ ಕಗಿಸೊ ರಬಾಡ ಕೇವಲ 61 ಎಸೆತಗಳಲ್ಲಿ 71 ರನ್ ಗಳಿಸಿ ಪಾಕಿಸ್ತಾನವನ್ನು ದಿಗ್ಭ್ರಮೆಗೊಳಿಸಿದರು. ಅವರ ಅಬ್ಬರದ ಅರ್ಧಶತಕದಿಂದ ದಕ್ಷಿಣ ಆಫ್ರಿಕಾ ತಂಡ 71 ರನ್‌ಗಳ ಮಹತ್ವದ ಮುನ್ನಡೆ ಸಾಧಿಸಿತು. ಕೇಶವ್ ಮಹಾರಾಜ್ ಮತ್ತು ಮುತ್ತುಸಾಮಿ ಅವರ ಕೊಡುಗೆಯೂ ತಂಡಕ್ಕೆ ಬಲ ನೀಡಿತು. ಪ್ರಮುಖ ವಿಕೆಟ್ ಕಳೆದುಕೊಂಡರೂ ರಬಾಡ ಇನ್ನಿಂಗ್ಸ್ ದಕ್ಷಿಣ ಆಫ್ರಿಕಾ ತಂಡವನ್ನು ಬಲಪಡಿಸಿತು.

ಪಾಕಿಸ್ತಾನ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ (Pakistan vs South Africa) ವೇಗಿ ಕಗಿಸೊ ರಬಾಡ (Kagiso Rabada) ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಆತಿಥೇಯ ತಂಡವನ್ನು ದಿಗ್ಭ್ರಮೆಗೊಳಿಸಿದ್ದಾರೆ. ರಬಾಡ ಕೇವಲ 38 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ ಅರ್ಧಶತಕ ಗಳಿಸಿದರು. ಅಂತಿಮವಾಗಿ 61 ಎಸೆತಗಳಲ್ಲಿ 71 ರನ್ ಬಾರಿಸಿದ ರಬಾಡ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ, ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್‌ಗಳ ಮುನ್ನಡೆ ಸಾಧಿಸಿದೆ. ಒಂದು ಹಂತದಲ್ಲಿ, ದಕ್ಷಿಣ ಆಫ್ರಿಕಾ ಕೇವಲ 235 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಕೇಶವ್ ಮಹಾರಾಜ್, ಮುತ್ತುಸಾಮಿ ಮತ್ತು ರಬಾಡ ಅವರ ಅಮೋಘ ಇನ್ನಿಂಗ್ಸ್ ತಂಡವನ್ನು ಮುನ್ನಡೆ ಸಾಧಿಸುವಂತೆ ಮಾಡಿತು.
ಪಾಕಿಸ್ತಾನಕ್ಕೆ ಆಘಾತ ನೀಡಿದ ರಬಾಡ
ಕಗಿಸೊ ರಬಾಡ ಅವರ ಅರ್ಧಶತಕದ ವಿಶೇಷತೆ ಏನೆಂದರೆ, 11 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಬಾಡ ಬಿರುಸಿನ ಇನ್ನಿಂಗ್ಸ್ ಆಡಿದರು. ರಬಾಡ ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳು ಸೇರಿದ್ದವು. ಇದು ಮಾತ್ರವಲ್ಲದೆ ರಬಾಡ, ಮುತ್ತುಸಾಮಿ ಅವರೊಂದಿಗೆ 98 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ರಬಾಡ ಅವರ ವಿಕೆಟ್ ಪತನದಿಂದಾಗಿ ಮುತ್ತುಸಾಮಿ ಶತಕ ವಂಚಿತರಾದರು. ಆದಾಗ್ಯೂ ಮುತ್ತುಸಾಮಿ 89 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ಕೇಶವ್ ಮಹಾರಾಜ್ ಕೂಡ 53 ಎಸೆತಗಳಲ್ಲಿ 30 ರನ್ ಕಲೆಹಾಕಿದರು. ಉಳಿದಂತೆ ಆಫ್ರಿಕಾ ಪರ ಜಾರ್ಜಿ 55 ಮತ್ತು ಸ್ಟಬ್ಸ್ 76 ರನ್‌ಗಳ ಕಾಣಿಕೆ ನೀಡಿದರು.
ಆಸಿಫ್ ಅಫ್ರಿದಿ ಪರಿಶ್ರಮ ವ್ಯರ್ಥ
ರಬಾಡ ಅವರ ಅಬ್ಬರದ ಬ್ಯಾಟಿಂಗ್ ಪಾಕಿಸ್ತಾನದ ಸ್ಪಿನ್ನರ್ ಆಸಿಫ್ ಅಫ್ರಿದಿಯ ಪ್ರಯತ್ನಗಳು ವ್ಯರ್ಥವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸಿಫ್ ಆರು ವಿಕೆಟ್‌ಗಳನ್ನು ಪಡೆದರಾದರೂ ದಕ್ಷಿಣ ಆಫ್ರಿಕಾ ತಂಡ 404 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಪಾಕಿಸ್ತಾನಕ್ಕೆ ಕಳಪೆ ಆರಂಭ
71 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ಕೇವಲ 16 ರನ್‌ಗಳಿಗೆ ತನ್ನ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭಿಕ ಆಟಗಾರರಾದ ಇಮಾಮ್-ಉಲ್-ಹಕ್ 9 ರನ್‌ಗಳಿಗೆ ಔಟಾದರೆ, ಅಬ್ದುಲ್ಲಾ ಶಫೀಕ್ 6 ರನ್‌ಗಳಿಗೆ ಔಟಾದರು. ನಾಯಕ ಶಾನ್ ಮಸೂದ್ ಖಾತೆ ತೆರೆಯಲೂ ವಿಫಲರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Wed, 22 October 25
