ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ನಲ್ಲಿ ಯುವ ಬ್ಯಾಟ್ಸ್ಮನ್ ಅಲಿ ಓರ್ (Ali Orr) ದ್ವಿಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಗ್ರೂಪ್-ಎ ನಲ್ಲಿನ ಪಂದ್ಯದಲ್ಲಿ ಸಸೆಕ್ಸ್ ಹಾಗೂ ಸೋಮರ್ಸೆಟ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೋಮರ್ಸೆಟ್ ತಂಡದ ನಾಯಕ ಮ್ಯಾಟ್ ರೇನ್ಶಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಸಸೆಕ್ಸ್ ಪರ ಅಲಿ ಓರ್ ಹಾಗೂ ಡೇನಿಯಲ್ ಇಬ್ರಾಹಿಂ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ 3ನೇ ಓವರ್ನ ಅಂತಿಮ ಎಸೆತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಡೇನಿಯ್ ಇಬ್ರಾಹಿಂ (1) ನಿರ್ಗಮಿಸಿದರು. ಆ ಬಳಿಕ ಬಂದ ಟಾಮ್ ಕ್ಲಾರ್ಕ್ (12) ರನೌಟ್ಗೆ ಬಲಿಯಾದರು.
ಈ ಹಂತದಲ್ಲಿ ಜೊತೆಗೂಡಿದ ನಾಯಕ ಚೇತೇಶ್ವರ ಪೂಜಾರ ಹಾಗೂ ಅಲಿ ಓರ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ನಾಲ್ಕನೇ ವಿಕೆಟ್‌ಗೆ 140 ರನ್‌ಗಳ ಅದ್ಭುತ ಜೊತೆಯಾಟವಾಡುವ ಮೂಲಕ ಈ ಜೋಡಿ ಇಡೀ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಈ ವೇಳೆ 66 ಎಸೆತಗಳಲ್ಲಿ 66 ರನ್ ಬಾರಿಸಿದ್ದ ಪೂಜಾರ ಅಲ್ಡ್ರಿಡ್ಜ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಅಲಿ ಓರ್ ಅಷ್ಟರಲ್ಲಾಗಲೇ ಸಿಡಿಲಬ್ಬರ ಆರಂಭಿಸಿದ್ದರು. ಸೋಮರ್ಸೆಟ್ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಅಲಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅದರಂತೆ 106 ಎಸೆತಗಳಲ್ಲಿ ಶತಕ ಪೂರೈಸಿದ ಅಲಿ ಓರ್ ಆ ನಂತರ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದರು. ಪರಿಣಾಮ ಮುಂದಿನ 100 ರನ್ಗಳು ಕೇವಲ 53 ಎಸೆತಗಳಲ್ಲಿ ಮೂಡಿಬಂತು. ಅದರಂತೆ ಕೇವಲ 159 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಹೊಸ ದಾಖಲೆ ಬರೆದರು.
ಈ ಮೂಲಕ ರಾಯಲ್ ಲಂಡನ್ ಕಪ್ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಸಸೆಕ್ಸ್ ಆಟಗಾರ, ಸಸೆಕ್ಸ್ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಅಲಿ ಓರ್ ನಿರ್ಮಿಸಿದರು. ಅಂತಿಮವಾಗಿ 161 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 18 ಫೋರ್ಗಳೊಂದಿಗೆ 206 ರನ್ ಬಾರಿಸುವ ಮೂಲಕ ಅಲಿ ಓರ್ ತಂಡದ ಮೊತ್ತವನ್ನು ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 397 ಕ್ಕೆ ತಂದು ನಿಲ್ಲಿಸಿದರು.
? ❎ 2️⃣
What a moment for Ali Orr ??#RLC22 pic.twitter.com/yEcXnTsUZD
— Royal London Cup (@RoyalLondonCup) August 19, 2022
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸೋಮರ್ಸೆಟ್ ತಂಡವು 38.2 ಓವರ್ಗಳಲ್ಲಿ 196 ರನ್ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 201 ರನ್‌ಗಳ ಅಂತರದೊಂದಿಗೆ ಸೋಲೊಪ್ಪಿಕೊಂಡಿತು. ಸಸೆಕ್ಸ್ ಪರ ಅಲಿ ಓರ್ ಕಲೆಹಾಕಿದ ಮೊತ್ತವನ್ನು ಸೋಮರ್ಸೆಟ್ ಬ್ಯಾಟ್ಸ್ಮನ್ ಜೊತೆಯಾಗಿಲ್ಲ ಕಲೆಹಾಕಿಲ್ಲ ಎಂಬುದು ವಿಶೇಷ.