IND vs SL: ದಾಖಲೆಯನ್ನು ಮನಸಾರೆ ಕೊಂಡಾಡಿ, ಅಶ್ವಿನ್​ಗೆ ಹೊಸ ಗುರಿ ನೀಡಿದ ಕಪಿಲ್ ದೇವ್!

Kapil Dev: ವಿಶೇಷವಾಗಿ ಕೆಲವು ಸಮಯದಿಂದ ಅವಕಾಶಗಳನ್ನು ಪಡೆಯದ ಆಟಗಾರನಿಗೆ ಇದು ಅತ್ಯಂತ ವಿಶೇಷ ಸಾಧನೆಯಾಗಿದೆ. ಅವಕಾಶ ಸಿಕ್ಕಿದ್ದರೆ ಬಹಳ ಹಿಂದೆಯೇ 434 ವಿಕೆಟ್ ಕಬಳಿಸುತ್ತಿದ್ದರು.

IND vs SL: ದಾಖಲೆಯನ್ನು ಮನಸಾರೆ ಕೊಂಡಾಡಿ, ಅಶ್ವಿನ್​ಗೆ ಹೊಸ ಗುರಿ ನೀಡಿದ ಕಪಿಲ್ ದೇವ್!
ಕಪಿಲ್ ದೇವ್, ಅಶ್ವಿನ್
Updated By: ಪೃಥ್ವಿಶಂಕರ

Updated on: Mar 07, 2022 | 7:38 PM

ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್ ಭಾರತ ತಂಡದ (Indian Cricket Team) ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ (Ravichandran Ashwin) ಅವರಿಗೆ ತುಂಬಾ ವಿಶೇಷವಾಗಿತ್ತು. ಈ ಪಂದ್ಯದಲ್ಲಿ, ಅವರು ವಿಶ್ವ ಚಾಂಪಿಯನ್ ನಾಯಕ ಕಪಿಲ್ ದೇವ್ (Kapil Dev) ಅವರ ದಾಖಲೆಯನ್ನು ಮುರಿದು ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಎನಿಸಿಕೊಂಡರು. ಈ ಪಂದ್ಯದಲ್ಲಿ ಅಶ್ವಿನ್ ಐದು ವಿಕೆಟ್ ಪಡೆದು ಮಹತ್ವದ ದಾಖಲೆ ಬರೆದಿದ್ದಾರೆ. ಕಪಿಲ್ ಅವರನ್ನು ಹಿಂದಿಕ್ಕಲು ಅಶ್ವಿನ್​ಗೆ ಕೇವಲ ಐದು ವಿಕೆಟ್‌ಗಳ ಅಗತ್ಯವಿತ್ತು. ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್‌ನಲ್ಲಿ 434 ವಿಕೆಟ್ ಪಡೆದಿದ್ದಾರೆ. ಮೊಹಾಲಿ ಟೆಸ್ಟ್‌ಗೂ ಮುನ್ನ ಅಶ್ವಿನ್ 431 ವಿಕೆಟ್‌ಗಳನ್ನು ಪಡೆದಿದ್ದರು. ತಮ್ಮ ವೃತ್ತಿಜೀವನದ 85ನೇ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ಕಪಿಲ್ ದೇವ್ ಅವರ ದಾಖಲೆಯನ್ನು ಅಶ್ವಿನ್ ಮುರಿದರು. ಇದರೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನ ಟಾಪ್-10 ಬೌಲರ್‌ಗಳ ಸಾಲಿಗೆ ಸೇರಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 9ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.ಅಶ್ವಿನ್ ಯಶಸ್ಸಿನಿಂದ ತುಂಬಾ ಸಂತೋಷಗೊಂಡಿರುವ ಕಪಿಲ್, ಅಶ್ವಿನ್ 500 ವಿಕೆಟ್ ಪಡೆಯುವ ಗುರಿಯನ್ನು ಹೊಂದಬೇಕೆಂದು ಬಯಸಿದ್ದಾರೆ.

ಅಶ್ವಿನ್ 500 ಕ್ಕೂ ಹೆಚ್ಚು ವಿಕೆಟ್‌ಗಳಿಗೆ ಅರ್ಹ
ಅಶ್ವಿನ್ ಅವರನ್ನು ಅಭಿನಂದಿಸಿದ ಕಪಿಲ್ ದೇವ್ ಮಿಡ್-ಡೇ ಜೊತೆ ಮಾತನಾಡಿ, ವಿಶೇಷವಾಗಿ ಕೆಲವು ಸಮಯದಿಂದ ಅವಕಾಶಗಳನ್ನು ಪಡೆಯದ ಆಟಗಾರನಿಗೆ ಇದು ಅತ್ಯಂತ ವಿಶೇಷ ಸಾಧನೆಯಾಗಿದೆ. ಅವಕಾಶ ಸಿಕ್ಕಿದ್ದರೆ ಬಹಳ ಹಿಂದೆಯೇ 434 ವಿಕೆಟ್ ಕಬಳಿಸುತ್ತಿದ್ದರು. ಅವರ ಈ ಸಾಧನೆಯಿಂದ ನನಗೆ ತುಂಬಾ ಸಂತೋಷವಾಗಿದೆ.
ಈಗ ನನ್ನ ಸಮಯ ಮುಗಿದಿರುವುದರಿಂದ ನನ್ನ ಹೆಸರಲ್ಲಿ ಆ ದಾಖಲೆ ಯಾಕಿರಬೇಕೆಂದು ಹೇಳಿಕೊಂಡಿದ್ದಾರೆ. ಜೊತೆಗೆ ಅಶ್ವಿನ್ ಒಬ್ಬ ಅದ್ಭುತ ಕ್ರಿಕೆಟಿಗ, ಅವರೊಬ್ಬ ಸ್ಮಾರ್ಟ್ ಸ್ಪಿನ್ನರ್.. ಅವರು ಈಗ 500 ಟೆಸ್ಟ್ ವಿಕೆಟ್‌ಗಳನ್ನು ಪಡೆಯುವ ಗುರಿ ಇಟ್ಟುಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ ಅಶ್ವಿನ್ ಈ ಗುರಿಯನ್ನು ಮುಟ್ಟುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಪಿಲ್ ಹೇಳಿಕೊಂಡಿದ್ದಾರೆ.

ಧನ್ಯವಾದ ಅರ್ಪಿಸಿದ ಅಶ್ವಿನ್
ಕಪಿಲ್ ಅವರ ಹೊಗಳಿಕೆಗೆ ಧನ್ಯವಾದ ಎಂದಿರುವ ಅಶ್ವಿನ್, ನಾನು ಈ ಹಂತಕ್ಕೆ ಬರುತ್ತೇನೆ ಎಂದು ಯೋಚಿಸಿರಲಿಲ್ಲ. ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವಶ್ವಿನ್, 28 ವರ್ಷಗಳ ಹಿಂದೆ ನಾನು ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ಅವರ ವಿಕೆಟ್‌ಗಳ ವಿಶ್ವ ದಾಖಲೆಯನ್ನು ಆಚರಿಸುತ್ತಿದ್ದೆ. ನಾನು ಆಫ್ ಸ್ಪಿನ್ನರ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ದೇಶಕ್ಕಾಗಿ ಆಡುತ್ತೇನೆ ಮತ್ತು ಇಲ್ಲಿ ಶ್ರೇಷ್ಠ ಕ್ರಿಕೆಟಿಗರ ವಿಕೆಟ್‌ಗಳ ದಾಖಲೆಯನ್ನು ಮುರಿಯುತ್ತೇನೆ ಎಂತಲೂ ಅಂದುಕೊಂಡಿರಲಿಲ್ಲ. ಈ ಆಟ ನನಗೆ ಎಲ್ಲವನ್ನೂ ನೀಡಿದೆ. ಅದಕ್ಕಾಗಿ ನಾನು ತುಂಬಾ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ ಎಂದು ಅಶ್ವಿನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:IND vs SL: 100ನೇ ಟೆಸ್ಟ್​ ಪಂದ್ಯದಲ್ಲಿ ತನ್ನ ವಿಶೇಷ ಅಭಿಮಾನಿಗೆ ವಿಶೇಷ ಉಡುಗೂರೆ ಕೊಟ್ಟ ಕೊಹ್ಲಿ! ವಿಡಿಯೋ ನೋಡಿ