ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ

Karn Sharma Retires: ಭಾರತದ ಅನುಭವಿ ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಯುಪಿ ಟಿ20 ಲೀಗ್‌ನಲ್ಲಿ ತಮ್ಮ ವಿದಾಯ ಪಂದ್ಯವಾಡಿದ ಅವರು ತಮ್ಮ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬಿಸಿಸಿಐ, ಕುಟುಂಬ ಮತ್ತು ವಿವಿಧ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಕೃತಜ್ಞತೆ ಸಲ್ಲಿಸಿ, ಭವಿಷ್ಯದಲ್ಲಿ ಕೋಚಿಂಗ್ ಅಥವಾ ಇತರ ಕ್ರಿಕೆಟ್ ಸಂಬಂಧಿತ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ
Karn Sharma

Updated on: Aug 23, 2026 | 9:46 PM

ಭಾರತದ ಅನುಭವಿ ಲೆಗ್ ಸ್ಪಿನ್ನರ್ ಕರ್ಣ್​ ಶರ್ಮಾ (Karn Sharma) ತಮ್ಮ 38ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮತ್ತು ಭಾರತೀಯ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಗಸ್ಟ್ 22 ರಂದು ನಡೆದ ಯುಪಿ ಟಿ20 ಲೀಗ್‌ನಲ್ಲಿ ಕಾನ್ಪುರ್ ಸೂಪರ್‌ಸ್ಟಾರ್ಸ್ ಮತ್ತು ಮೀರತ್ ಮಾವರಿಕ್ಸ್ ನಡುವಿನ ಪಂದ್ಯದ ನಂತರ ತಮ್ಮ ನಿವೃತ್ತಿಯ ನಿರ್ಧಾರವನ್ನು ಕರ್ಣ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಆಗಸ್ಟ್ 25 ರಂದು ಲಕ್ನೋದಲ್ಲಿ ನಡೆಯಲಿರುವ ಯುಪಿ ಟಿ20 ಲೀಗ್‌ನಲ್ಲಿ ತಮ್ಮ ವಿದಾಯ ಪಂದ್ಯವನ್ನು ಆಡುವುದಾಗಿಯೂ ಮಾಹಿತಿ ನೀಡಿದ್ದಾರೆ. ನಿವೃತ್ತಿ ನಿರ್ಧಾರವನ್ನು ಪ್ರಕಟಿಸುವುದರ ಜೊತೆಗೆ ಕರ್ಣ, ತಮ್ಮ ಕುಟುಂಬ, ಬಿಸಿಸಿಐ, ರೈಲ್ವೇಸ್, ಯುಪಿಸಿಎ, ಆಂಧ್ರ ಮತ್ತು ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಕೋಚಿಂಗ್ ಮತ್ತು ಇತರ ಕ್ರಿಕೆಟ್ ಸಂಬಂಧಿತ ಜವಾಬ್ದಾರಿಗಳನ್ನು ನಿರ್ವಹಿಸಲು ನಾನು ಸಿದ್ಧ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮೂರು ಸ್ವರೂಪಗಳಲ್ಲಿ ಆಡಿದ್ದ ಕರ್ಣ್

ಕರ್ಣ್ ಶರ್ಮಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ದೀರ್ಘವಾಗಿರಲಿಲ್ಲ. ಆದಾಗ್ಯೂ ಅವರು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದರು. 2014 ರ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ನೀಡಿದ್ದ ಕರ್ಣ್​ಗೆ ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಆ ಪಂದ್ಯದಲ್ಲಿ ಅವರು ಜೋ ರೂಟ್ ಅವರ ನಿರ್ಣಾಯಕ ವಿಕೆಟ್ ಕೂಡ ಪಡೆದಿದ್ದರು. ನಂತರ ಕೋಲ್ಕತ್ತಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೂಲಕ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಯ 264 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ನಂತರ ವಿರಾಟ್ ಕೊಹ್ಲಿ ತಮ್ಮ ಮೊದಲ ಟೆಸ್ಟ್ ನಾಯಕತ್ವ ಪಂದ್ಯದಲ್ಲಿ ಅನುಭವಿ ರವಿಚಂದ್ರನ್ ಅಶ್ವಿನ್ ಬದಲಿಗೆ ಕರ್ಣ್ ಶರ್ಮಾ ಅವರನ್ನು ತಂಡದಲ್ಲಿ ಆಡಿಸಿದ್ದರು. ಆ ಟೆಸ್ಟ್‌ನಲ್ಲಿ ಕರ್ಣ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಅದೇ ಕರ್ಣ್​ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಏಕೆಂದರೆ ಆ ಪಂದ್ಯದ ಬಳಿಕ ಕರ್ಣ್​ಗೆ ಆಡುವ ಅವಕಾಶ ಸಿಗಲಿಲ್ಲ.

ನಾನು ತುಂಬಾ ಕೃತಜ್ಞನಾಗಿದ್ದೇನೆ

ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಕರ್ಣ್, ‘ನಾನು ಈಗ ನಿವೃತ್ತಿ ಹೊಂದಲು ಬಯಸುತ್ತೇನೆ. ನನ್ನ ಕುಟುಂಬ, ಬಿಸಿಸಿಐ, ರೈಲ್ವೇಸ್, ಯುಪಿಸಿಎ, ಆಂಧ್ರಪ್ರದೇಶ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಮತ್ತು ಈ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿವೃತ್ತಿಯ ನಂತರ ನಾನು ತರಬೇತಿ ಮತ್ತು ಇತರ ಕ್ರಿಕೆಟ್ ಸಂಬಂಧಿತ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ದೇಶೀಯ ಕ್ರಿಕೆಟ್‌ ಪ್ರದರ್ಶನ

2007 ರಲ್ಲಿ ರೈಲ್ವೇಸ್ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕರ್ಣ್, ಸುಮಾರು ಎರಡು ದಶಕಗಳ ಕಾಲ ದೇಶೀಯ ಕ್ರಿಕೆಟ್ ಆಡಿದ್ದಾರೆ. ಈ ಸಮಯದಲ್ಲಿ, ಅವರು ರೈಲ್ವೇಸ್ ಜೊತೆಗೆ ಆಂಧ್ರ ಮತ್ತು ವಿದರ್ಭ ತಂಡಗಳಿಗೂ ಆಡಿದ್ದಾರೆ. ಇದಲ್ಲದೆ, ಕರ್ಣ​ ಶರ್ಮಾ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರರಾಗಿದ್ದು, ಅವರು ತಮ್ಮ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದ ತಂಡದಗಳ ಭಾಗವಾಗಿದ್ದಾರೆ. ಇದರಲ್ಲಿ ಮೂರು ವಿಭಿನ್ನ ಫ್ರಾಂಚೈಸಿಗಳೊಂದಿಗೆ ಹ್ಯಾಟ್ರಿಕ್ ಪ್ರಶಸ್ತಿಗಳು ಸೇರಿವೆ. ಸನ್‌ರೈಸರ್ಸ್ ಹೈದರಾಬಾದ್ (2016), ಮುಂಬೈ ಇಂಡಿಯನ್ಸ್ (2017), ಮತ್ತು ಚೆನ್ನೈ ಸೂಪರ್ ಕಿಂಗ್ಸ್ (2018) ತಂಡದ ಪರ ಕರ್ಣ್​ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us