Ranji Trophy: ವಯಸ್ಸು 16, ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ: ಹೊಸ ಸಂಚಲನ ಸೃಷ್ಟಿಸಿರುವ ಯುವ ವೇಗಿ

| Updated By: ಝಾಹಿರ್ ಯೂಸುಫ್

Updated on: Feb 20, 2022 | 3:46 PM

Edhen Apple Tom: 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿಯಲ್ಲೂ ಕೇರಳ ಪರ ಈಡನ್ ಉತ್ತಮ ಪ್ರದರ್ಶನ ನೀಡಿದ್ದರು. ತಂಡದ ಪರ 16 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಇದಾದ ಬಳಿಕವಷ್ಟೇ ಅವರಿಗೆ ಕೇರಳ ರಣಜಿ ತಂಡದ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಲಭಿಸಿತು.

Ranji Trophy: ವಯಸ್ಸು 16, ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ: ಹೊಸ ಸಂಚಲನ ಸೃಷ್ಟಿಸಿರುವ ಯುವ ವೇಗಿ
Edhen Apple Tom
Follow us on

2022 ರ ರಣಜಿ ಸೀಸನ್​ನಲ್ಲಿ ಕೇರಳ ತಂಡವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ತಂಡದಲ್ಲಿ ಸಂಜು ಸ್ಯಾಮ್ಸನ್, ಶ್ರೀಶಾಂತ್​ರಂತಹ ಸ್ಟಾರ್ ಆಟಗಾರರಿದ್ದರೂ ಗೆಲುವಿನ ರೂವಾರಿ ಎನಿಸಿಕೊಂಡಿದ್ದು 16 ವರ್ಷ ಯುವ ವೇಗಿ ಈಡನ್ ಆ್ಯಪಲ್ ಟಾಮ್. ಟೂರ್ನಿಯ ಆರಂಭಕ್ಕೂ ಮುನ್ನ ಈಡನ್ ಆ್ಯಪಲ್ ತಮ್ಮ ಆಸಕ್ತಿಕರ ಹೆಸರಿನಿಂದ ಸುದ್ದಿಯಲ್ಲಿದ್ದರು. ಇದೀಗ ಚೊಚ್ಚಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಈಡನ್ 6 ವಿಕೆಟ್ ಕಬಳಿಸಿ ಮಿಂಚಿದ್ದರು. ಮೊದಲ ಇನಿಂಗ್ಸ್‌ನಲ್ಲಿ 41ಕ್ಕೆ ನಾಲ್ಕು ಪಡೆದಿದ್ದ ಈಡನ್, ಆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 30ಕ್ಕೆ ಎರಡು ವಿಕೆಟ್ ಉರುಳಿಸಿದರು. ಈ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಾಗಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿಶೇಷ ಎಂದರೆ ಮೇಘಾಲಯ ವಿರುದ್ಧದ ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ, ಈಡನ್ ತನ್ನ ಮೊದಲ ಎಸೆತದಲ್ಲಿ ವಿಕೆಟ್‌ಗಳನ್ನು ಉರುಳಿಸಿರುವುದು. ಮೊದಲ ಇನ್ನಿಂಗ್ಸ್‌ನಲ್ಲಿ ಕಿಶನ್ ಲಿಂಗ್ಡೋಹ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಡಿ ರವಿತೇಜ ಅವರನ್ನು ಔಟ್ ಮಾಡಿ ಎರಡೂ ಇನಿಂಗ್ಸ್​ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಎರಡೂ ವಿಕೆಟ್​ಗಳು ಸ್ಲಿಪ್ ಕ್ಯಾಚ್ ಮೂಲಕ ಮೂಡಿಬಂದಿದ್ದು ಮತ್ತೊಂದು ವಿಶೇಷ.

ಅಂದಹಾಗೆ 16 ವರ್ಷದ ಯುವ ಬೌಲರ್ ಕೇರಳ ತಂಡಕ್ಕೆ ಆಯ್ಕೆಯಾಗಿದ್ದು ಅಂತಿಮ ಕ್ಷಣದಲ್ಲಿ. ರಣಜಿ ಟ್ರೋಫಿಗೂ ಮುನ್ನ ಆಲಪ್ಪುಳದಲ್ಲಿ ನಡೆದ ಕೇರಳ ತಂಡದ ಪೂರ್ವಸಿದ್ಧತಾ ಶಿಬಿರದಲ್ಲಿ ಈಡನ್ ಆಪಲ್ ಟಾಮ್ ಕೂಡ ಭಾಗವಹಿಸಿದ್ದರು. ಈ ವೇಳೆ ಅನುಭವಿ ಬ್ಯಾಟ್ಸ್​ಮನ್​ಗಳನ್ನು ಭರ್ಜರಿ ಬೌಲಿಂಗ್‌ ಮೂಲಕ ಕಾಡುತ್ತಿರುವುದು ಕೇರಳದ ಕೋಚ್ ಟಿನು ಯೋಹನ್ನನ್ ಗಮನಿಸಿದ್ದಾರೆ. ಅಷ್ಟೇ ಅಲ್ಲದೆ ಯುವ ವೇಗಿಯ ಕರಾರುವಾಕ್ ದಾಳಿಯಿಂದ ಪ್ರಭಾವಿತರಾದ ಕೋಚ್ ಈಡನ್ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದರು. ಇದೀಗ ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದು 6 ವಿಕೆಟ್ ಉರುಳಿಸುವ ಮೂಲಕ ಕೋಚ್​ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಕೂಚ್ ಬೆಹಾರ್ ಟ್ರೋಫಿಯಲ್ಲೂ ಮಿಂಚಿಂಗ್:
ಇತ್ತೀಚೆಗೆ ನಡೆದ 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿಯಲ್ಲೂ ಕೇರಳ ಪರ ಈಡನ್ ಉತ್ತಮ ಪ್ರದರ್ಶನ ನೀಡಿದ್ದರು. ತಂಡದ ಪರ 16 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಇದಾದ ಬಳಿಕವಷ್ಟೇ ಅವರಿಗೆ ಕೇರಳ ರಣಜಿ ತಂಡದ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಲಭಿಸಿತು. ಅಂದಹಾಗೆ ಗುಜರಾತ್ ವಿರುದ್ದದ ಪಂದ್ಯದ ಮೂಲಕ ಕೇರಳ ಪರ ಕಿರಿಯರ ಕ್ರಿಕೆಟ್ ಜರ್ನಿ ಆರಂಭಿಸಿದ್ದ ಈಡನ್ ಇದೀಗ ಮುಂದಿನ ರಣಜಿ ಪಂದ್ಯದಲ್ಲೂ ಗುಜರಾತ್ ವಿರುದ್ಧವೇ ಆಡಲಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ ತಂಡವು 9 ವಿಕೆಟ್ ನಷ್ಟಕ್ಕೆ 505 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮೆಘಾಲಯ ತಂಡವು ಮೊದಲ ಇನಿಂಗ್ಸ್​ನಲ್ಲಿ 148 ರನ್​ಗೆ ಆಲೌಟಾದರೆ, 2ನೇ ಇನಿಂಗ್ಸ್​ನಲ್ಲಿ 191 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಕೇರಳ ತಂಡವು 166 ರನ್​ಗಳ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(Kerala’s 16 Year old Edhen Apple Tom is player of match on Ranji debut)