15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (DC vs RR) ನಡುವಣ ಪಂದ್ಯ ಐಪಿಎಲ್ 2022ರ ಮೊದಲ ವಿವಾದಕ್ಕೆ ಕಾರಣವಾಯಿತು. ಅಂಪೈರ್ ನೀಡಿದ ತೀರ್ಮಾನದಿಂದ ಬೇಸತ್ತ ಡೆಲ್ಲಿ ಕ್ಯಾಪಿಟಲ್ಸ್ ಡಗೌಟ್ನಲ್ಲಿ ಹೈ ಡ್ರಾಮವೇ ನಡೆಸಿತು. ಒಂದುಕಡೆ ರಿಷಭ್ ಪಂತ್ (Rishabh Pant) ತಾಳ್ಮೆ ಕಳೆದುಕೊಂಡು ಬ್ಯಾಟ್ಸ್ಮನ್ಗಳನ್ನು ಆಟ ನಿಲ್ಲಿಸಿ ಬನ್ನಿ ಎಂದು ಕರೆ ಕೊಟ್ಟರೆ ಇತ್ತ ಡೆಲ್ಲಿ ಕೋಚ್ ಪ್ರವೀಣ್ ಆಮ್ರೆ ಪಂದ್ಯ ಮಧ್ಯೆಯೇ ಮೈದಾನಕ್ಕೆ ಪ್ರವೇಶಿಸಿ ಅಂಪೈರ್ ಜೊತೆ ವಾದಕ್ಕಿಳಿದರು. ಕನಿಷ್ಠ ಥರ್ಡ್ ಅಂಪೈರ್ಗೆ ಮನವಿ ಸಲ್ಲಿಸಿ ಎಂಬ ಬೇಡಿಕೆ ಇಟ್ಟರು. ಆದರೆ, ಇದು ಯಾವುದಕ್ಕೂ ಬಗ್ಗದ ಲೆಗ್ ಅಂಪೈರ್ ಅದು ನೋ-ಬಾಲ್ ಅಲ್ಲ ಎಂದು ತೀರ್ಪು ನೀಡಿದ್ದ ಕಾರಣ, ಅದೇ ತೀರ್ಪಿಗೆ ಬದ್ಧರಾಗಿ ನಿಂತು ಆಟ ಮುಂದುವರಿಸಲು ಆನ್‌ಫೀಲ್ಡ್ ಅಂಪೈರ್ ತೀರ್ಮಾನಿಸಿದರು. ಇದೀಗ ಈ ನೋ ಬಾಲ್ (No Ball) ಕುರಿತು ನಡೆದ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಹೌದು, ನೋ ಬಾಲ್ ವಿಚಾರವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ನಾಯಕ ರಿಷಭ್ ಪಂತ್ ನಡೆದುಕೊಂಡ ರೀತಿ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತೆಯೆ ಇಂಗ್ಲೆಂಡ್ ಮಾಜಿ ಆಟಗಾರ, ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು ರಿಷಭ್ ಪಂತ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ಕ್ರಿಕೆಟ್ ಪಂದ್ಯ, ಫುಟ್ಬಾಲ್ ಅಲ್ಲ. ನೀವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಪೀಟರ್ಸನ್ ಹೇಳಿದ್ದಾರೆ.
ಕೋವಿಡ್ ಕಾರಣದಿಂದಾಗಿ ಈ ಪಂದ್ಯಕ್ಕೆ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಹಾಜರಿರಲಿಲ್ಲ. ಇವರು ಇದ್ದಿದ್ದರೆ ಈರೀತಿ ಘಟನೆ ನಡೆಯುತ್ತಿರಲಿಲ್ಲ ಎಂಬುದು ಪೀಟರ್ಸನ್ ಮಾತು. “ರಿಕಿ ಪಾಂಟಿಂಗ್ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪಂತ್ ಬಳಿ ಹೋಗಿ ನೀವು ಕೋಚನ್ನು ಆಟದ ಮಧ್ಯೆ ಕಳುಹಿಸುವುದು ಸರಿಯಾದ ನಿರ್ಧಾರವಲ್ಲ. ಇದು ಜಂಟಲ್ ಮೆನ್ ಗೇಮ್. ಜನರು ತಪ್ಪು ಮಾಡುತ್ತಾರೆ. ಎಷ್ಟೋ ಬಾರಿ ನಮಗೆ ಔಟಾಗದಿದ್ದರೂ ಔಟ್ ನೀಡಿದ್ದಾರೆ, ನಾನು ಮತ್ತು ಸ್ವಾನಿ (ಗ್ರೇಮ್ ಸ್ವಾನ್) 20 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇವೆ. ಆದರೆ ಇಂತಹ ಘಟನೆಗಳು ಕ್ರಿಕೆಟ್ ಆಟಕ್ಕೆ ಒಳ್ಳೆಯದಲ್ಲ. ಇದು ಅವರ ಏಕಾಗ್ರತೆಗೆ ಅಡ್ಡಿಪಡಿಸಿರಬಹುದು. ಈ ವಿಚಾರ ಅಂಪೈರ್ ಕರೆಗಿಂತ ಹೆಚ್ಚು ಡೆಲ್ಲಿ ತಂಡದ ನಡವಳಿಕೆ ಸಂಬಂಧಿಸಿದೆ,” ಎಂದು ಪೀಟರ್ಸನ್ ಹೇಳಿದ್ದಾರೆ.
#IPL2022
This is unacceptable in gentleman game pic.twitter.com/Vhw5vIFC83— That Cric Boy (@ThatCric_Guy) April 22, 2022
ಇನ್ನು ಈ ಬಗ್ಗೆ ಸ್ವತಃ ರಿಷಭ್ ಪಂತ್ ಅವರೇ ಮಾತನಾಡಿದ್ದು, “ಆ ಎಸೆತಕ್ಕೆ ನೋ ಬಾಲ್ ತೀರ್ಪು ಕೊಟ್ಟಿದ್ದರೆ, ನಮ್ಮ ಪಾಲಿಗೆ ಅತ್ಯಮೂಲ್ಯವಾಗಿರುತ್ತಿತ್ತು. ಅದನ್ನು ನಾವು ಕೂಡ ಪರಿಶೀಲನೆ ಮಾಡಬಹುದಿತ್ತು. ಆದರೆ ಇದು ನಮ್ಮ ನಿಯಂತ್ರಣದಲ್ಲಿಲ್ಲ. ಇದರಿಂದ ಎಲ್ಲರಿಗೂ ತುಂಬಾ ನೋವಾಗಿದೆ. ಏಕೆಂದರೆ, ಅದು ನೋ ಬಾಲ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಥರ್ಡ್ ಅಂಪೈರ್ ಮಧ್ಯ ಪ್ರವೇಶಿಸಿ ನೋ ಬಾಲ್ ಎಂದು ತೀರ್ಪು ನೀಡಬಹುದಿತ್ತು. ಆದರೆ, ಈ ಕೆಲಸ ಕೂಡ ಅಲ್ಲಿ ನಡೆಯಲಿಲ್ಲ. ಈ ನೋ ಬಾಲ್ ವಿಷಯದಲ್ಲಿ ಸರಿಯಾದ ತೀರ್ಪು ಮೂಡಿ ಬಂದಿದ್ದರೆ, ಇಡೀ ಪಂದ್ಯದ ಚಿತ್ರಣ ಬದಲಾಗುತ್ತಿತ್ತು. ಮೈದಾನದಲ್ಲಿ ನಮಗೆ ಏನಾಯಿತು ಅದು ಸರಿಯಲ್ಲ. ಇಬ್ಬರೂ ಅಂಪೈರ್‌ಗಳು ನೋ ಬಾಲ್ ವಿಷಯದಲ್ಲಿ ತಪ್ಪು ಮಾಡಿದ್ದಾರೆಂದು ನನಗೆ ಅನಿಸುತ್ತಿದೆ,” ಎಂದು ಪಂತ್ ಪಂದ್ಯದ ಬಳಿಕ ತಿಳಿಸಿದ್ದಾರೆ.
IPL 2022 Points Table: ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್ ಎಲ್ಲದರಲ್ಲೂ ರಾಜಸ್ಥಾನವೇ ಟಾಪ್
Rishabh Pant: ನೋ ಬಾಲ್ ವಿವಾದ: ಪಂದ್ಯ ಮುಗಿದ ಬಳಿಕ ಅಂಪೈರ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್