ಕ್ರಿಕೆಟ್ ಕ್ಲಬ್​ನಲ್ಲಿ ಧಾರ್ಮಿಕ ಚುಟುವಟಿಕೆ: ಟೀಮ್ ಇಂಡಿಯಾ ಆಟಗಾರ್ತಿಯ ಸದಸ್ಯತ್ವ ರದ್ದು

| Updated By: ಝಾಹಿರ್ ಯೂಸುಫ್

Updated on: Oct 22, 2024 | 1:40 PM

Jemimah Rodrigues: ಜೆಮಿಮಾ ರೊಡ್ರಿಗಸ್ ಟೀಮ್ ಇಂಡಿಯಾದ ಖಾಯಂ ಸದಸ್ಯ. ಈಗಾಗಲೇ ಭಾರತದ ಪರ 104 ಟಿ20 ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ 30 ಏಕದಿನ ಹಾಗೂ 3 ಟೆಸ್ಟ್ ಪಂದ್ಯಗಳಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ತಂದೆಯ ಕಾರಣದಿಂದಾಗಿ ಜೆಮಿಮಾ ಪ್ರತಿಷ್ಠಿತ ಕ್ಲಬ್​ನಿಂದ ಹೊರಬಿದ್ದಿದ್ದಾರೆ.

ಕ್ರಿಕೆಟ್ ಕ್ಲಬ್​ನಲ್ಲಿ ಧಾರ್ಮಿಕ ಚುಟುವಟಿಕೆ: ಟೀಮ್ ಇಂಡಿಯಾ ಆಟಗಾರ್ತಿಯ ಸದಸ್ಯತ್ವ ರದ್ದು
Jemimah Rodrigues
Follow us on

ಪ್ರತಿಷ್ಠಿತ ಖಾರ್ ಜಿಮ್​ಖಾನಾ ಕ್ಲಬ್ ಟೀಮ್ ಇಂಡಿಯಾ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಅವರ ತಂದೆ ಖಾರ್ ಜಿಮ್​ಖಾನಾವನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಿಸಿಕೊಂಡ ಗಂಭೀರ ಆರೋಪ ಕೇಳಿ ಬಂದಿದ್ದು, ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈನ ಖ್ಯಾತ ಕ್ರಿಕೆಟ್​ ಕ್ಲಬ್​ಗಳಲ್ಲಿ ಖಾರ್ ಜಿಮ್​ಖಾನಾ ಕೂಡ ಒಂದು. ಈ ಕ್ಲಬ್​ನಲ್ಲಿ ಜೆಮಿಮಾ ರೊಡ್ರಿಗಸ್ ಸದಸ್ಯರಾಗಿದ್ದರು. ಆದರೆ ಅವರ ತಂದೆ ಇವಾನ್ ಅವರು ಈ ಸದಸ್ಯತ್ವವನ್ನು ದುರಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಕ್ಲಬ್​ನ ಜಾಗವನ್ನು ಧಾರ್ಮಿಕ ಚಟುವಟಿಕೆಗಳಿಗಾಗಿ ಬಳಸುತ್ತಿದ್ದರು ಎಂದು ಆರೋಪ ಕೇಳಿ ಬಂದಿದೆ.

ಅದರಲ್ಲೂ ಜಿಮ್​ಖಾನಾ ಸ್ಥಳದಲ್ಲಿ ಮತಾಂತರದಂತಹ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಜೆಮಿಮಾ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.

ಈ ವಿಷಯದ ಬಗ್ಗೆ ಕ್ಲಬ್ ಹೇಳಿದ್ದೇನು?

ಖಾರ್ ಜಿಮ್​ಖಾನಾ ಕ್ಲಬ್ ತನ್ನ ವಾರ್ಷಿಕ ಸಭೆಯಲ್ಲಿ ಜೆಮಿಮಾ ರೊಡ್ರಿಗಸ್ ಅವರ ಸದಸ್ಯತ್ವವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಭಾರತೀಯ ಆಟಗಾರ್ತಿಯ ವಿರುದ್ಧ ತೆಗೆದುಕೊಂಡ ಕ್ರಮವನ್ನು ಕ್ಲಬ್ ಅಧ್ಯಕ್ಷ ವಿವೇಕ್ ದೇವ್ನಾನಿ ಕೂಡ ಖಚಿತಪಡಿಸಿದ್ದಾರೆ.

ಇಂಡಿಯನ್ ಎಕ್ಸ್​ಪ್ರೆಸ್ ವರದಿ ಪ್ರಕಾರ, ಜೆಮಿಮಾಗೆ 3 ವರ್ಷಗಳ ಗೌರವ ಸದಸ್ಯತ್ವ ನೀಡಲಾಗಿತ್ತು. ಇದೀಗ ಈ ಸದಸ್ಯತ್ವವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಒಮ್ಮತದ ನಿರ್ಣಯ ಅಂಗೀಕರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಲಬ್‌ನ ಮ್ಯಾನೇಜಿಂಗ್ ಕಮಿಟಿ ಸದಸ್ಯ ಶಿವ ಮಲ್ಹೋತ್ರಾ ತಿಳಿಸಿದ್ದಾರೆ.

ಜೆಮಿಮಾ ಅವರ ತಂದೆ ಇವಾನ್ ಬ್ರದರ್ ಮ್ಯಾನುಯೆಲ್ ಮಿನಿಸ್ಟ್ರೀಸ್ ಹೆಸರಿನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು. ಅಲ್ಲದೆ ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಪ್ರೆಸಿಡೆನ್ಸಿ ಹಾಲ್ ಅನ್ನು ಬುಕ್ ಮಾಡಿದ್ದರು. ಈ ಅವಧಿಯಲ್ಲಿ ಇವಾನ್ ಅವರು 35 ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಗಳು ಧಾರ್ಮಿಕ ಚುಟುವಟಿಕೆಗಳಿಗೆ ಸಂಬಂಧಿಸಿದ್ದು.

ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?

ಅದರಲ್ಲೂ ಧಾರ್ಮಿಕ ಪರಿವರ್ತನೆ ಸೇರಿದಂತೆ ಅನೇಕ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿದ್ದರು. ನಾವು ದೇಶದಾದ್ಯಂತ ನಡೆಯುತ್ತಿರುವ ಧಾರ್ಮಿಕ ಮತಾಂತರಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಈ ಕೆಲಸ ನಮ್ಮ ಮೂಗಿನ ನೇರಕ್ಕೆ ಅಂತಹ ಕೆಲಸಗಳು ನಡೆಯುತ್ತಿತ್ತು. ಜಿಮ್​ಖಾನಾದ ನಿಯಮಗಳ ಪ್ರಕಾರ ಕ್ಲಬ್‌ನಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಖಾರ್​ ಕ್ಲಬ್‌ನ ಮ್ಯಾನೇಜಿಂಗ್ ಕಮಿಟಿ ಸದಸ್ಯ ಶಿವ ಮಲ್ಹೋತ್ರಾ ತಿಳಿಸಿದ್ದಾರೆ.