CCL 2025: ಮೈಸೂರಲ್ಲಿ ಕಿಚ್ಚನ ಕ್ರಿಕೆಟ್ ದಸರಾ; ಸಿಸಿಲ್ ಸೆಮೀಸ್ ಹಾಗೂ ಫಿನಾಲೆ ಅರಮನೆ ನಗರಿಯಲ್ಲಿ!
Mysore to Host CCL Semi-Finals & Finals: 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ. ಕರ್ನಾಟಕ ಬುಲ್ಡೋಜರ್ಸ್ ನಾಯಕ ಕಿಚ್ಚ ಸುದೀಪ್ ಅವರ ಒತ್ತಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೈಸೂರಿನಲ್ಲಿ ಸಿಸಿಎಲ್ ಪಂದ್ಯಗಳು ನಡೆಯುವುದು ಇದೇ ಮೊದಲು. ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ನಾಕೌಟ್ ಸುತ್ತಿನ ಪಂದ್ಯಗಳು ಮಾರ್ಚ್ 1 ಮತ್ತು 2 ರಂದು ನಡೆಯಲಿವೆ.

ವಾರಾಂತ್ಯದಲ್ಲಿ ನಡೆಯುತ್ತಿರುವ 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಿಂದ ಪಂದ್ಯಕ್ಕೆ ತನ್ನ ಜನಪ್ರಿಯತೆಯನ್ನು ದ್ವಿಗುಣಗೊಳಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಯಾವ ಐಪಿಎಲ್ಗೂ ಕಡಿಮೆ ಇಲ್ಲದಂತಹ ಪ್ರದರ್ಶನ ಸಿನಿ ತಾರೆಯಿಂದ ಹೊರಬರುತ್ತಿರುವುದು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ನಲ್ಲೂ ಯಾವ ವೃತ್ತಿಪರ ಕ್ರಿಕೆಟರ್ಗೂ ಕಡಿಮೆ ಇಲ್ಲದಂತಹ ಪ್ರದರ್ಶನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಕಂಡುಬರುತ್ತಿದೆ. ಇದೇ ಕಾರಣಕ್ಕೆ ಪ್ರತಿ ಪಂದ್ಯಕ್ಕೂ ಕ್ರೀಡಾಂಗಣಗಳು ಕಿಕ್ಕಿರಿದು ತುಂಬುತ್ತಿವೆ. ಅದರಲ್ಲೂ ಜನಪ್ರಿಯ ನಟರಿಂದಲೇ ತುಂಬಿ ತುಳುಕುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಕಿಚ್ಚ ಸುದೀಪ್ ನಾಯಕತ್ವದಲ್ಲಿ ಅಜೇಯ ಓಟವನ್ನು ಮುಂದುವರೆಸಿರುವುದು ಕರ್ನಾಟಕದಲ್ಲಿ ಈ ಲೀಗ್ಗೆ ಇನ್ನಷ್ಟು ಮನ್ನಣೆ ಸಿಗುವಂತೆ ಮಾಡಿದೆ. ಈ ನಡುವೆ ಕನ್ನಡದ ಸಿಸಿಎಲ್ ಪ್ರಿಯರಿಗೆ ಸಂತಸ ಸುದ್ದಿಯೊಂದು ಸಿಕ್ಕಿದ್ದು, ಈ ಲೀಗ್ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೈಸೂರು ಆತಿಥ್ಯವಹಿಸಲಿದೆ. ಸ್ವತಃ ಈ ವಿಚಾರವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.
ಕಿಚ್ಚನ ಒತ್ತಡಕ್ಕೆ ಮಣಿದ ಆಯೋಜಕರು
ವಾಸ್ತವವಾಗಿ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ವೇಳಾಪಟ್ಟಿಯಲ್ಲಿ ಲೀಗ್ ಹಂತದ ಪಂದ್ಯಗಳಿಗೆ ಮಾತ್ರ ಸ್ಥಳವನ್ನು ನಿಗದಿಪಡಿಸಲಾಗಿತ್ತು. ಉಳಿದಂತೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಸ್ಥಳ ನಿಗದಿಪಡಿಸಲಾಗಿರಲಿಲ್ಲ. ಆದರೆ ವರದಿಯ ಪ್ರಕಾರ ಈ ಲೀಗ್ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಕೊಯಮತ್ತೂರು ಹಾಗೂ ಸೇಲಂನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆಯೋಜಕರ ಎದುರು ಪಟ್ಟು ಹಿಡಿದು ಕುಳಿತ ಕಿಚ್ಚ ಸುದೀಪ್ ಕೊನೆಗೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿಯ ಸಿಸಿಎಲ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಕರ್ನಾಟಕದಲ್ಲಿ ಅದರಲ್ಲೂ ಮೈಸೂರಿನಲ್ಲಿ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಾಸ್ತವವಾಗಿ ಉದ್ಘಾಟನಾ ಪಂದ್ಯವನ್ನೂ ಈ ಮೊದಲು ಹೈದರಾಬಾದ್ನಲ್ಲಿ ನಡೆಸಲು ತೀಮಾರ್ನಿಸಲಾಗಿತ್ತು. ಆಗಲೂ ಆಯೋಜಕರ ಮುಂದೆ ಕುಳಿತಿದ್ದ ಕಿಚ್ಚ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಕಿಚ್ಚನ ಈ ಶ್ರಮಕ್ಕೆ ಪ್ರತಿಫಲವಾಗಿ ಉದ್ಘಾಟನಾ ಪಂದ್ಯದ ಎಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿ ಇಡೀ ಕ್ರೀಡಾಂಗಣವೇ ಪ್ರೇಕ್ಷಕರಿಂದ ತುಂಬಿ ತುಳುಕಿತ್ತು. ಇದೀಗ ಮೈಸೂರಿನಲ್ಲಿ ನಡೆಯುವ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೂ ಇದೇ ರೀತಿಯ ಪ್ರೋತ್ಸಾಹ ಸಿಗುವ ನಿರೀಕ್ಷೆಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವಿದೆ.
ಮೊದಲ ಬಾರಿಗೆ ಮೈಸೂರಿನಲ್ಲಿ ಸಿಸಿಎಲ್
ಕಿಚ್ಚನ ಈ ಮನವಿಗೆ ಕಾರಣವೂ ಇದ್ದು, ಈ ಲೀಗ್ನಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಆಡಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಆಡಿರುವ ಮೂರು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದುಕೊಂಡು ನಾಕೌಟ್ ಸುತ್ತಿಗೆ ಭಾಗಶಃ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಹೀಗಾಗಿ ಕನ್ನಡಿಗರ ಬೆಂಬಲದೊಂದಿಗೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯವನ್ನು ಆಡಬೇಕೆಂಬ ಇರಾದೆ ಕಿಚ್ಚ ಸುದೀಪ್ ಅವರದ್ದು. ಅದರಂತೆ ಕಿಚ್ಚನ ಮನವಿಗೆ ಒಪ್ಪಿಗೆ ಸೂಚಿಸಿರುವ ಆಯೋಜಕರು ಮೈಸೂರಿನಲ್ಲಿ ಸಿಸಿಎಲ್ ನಾಕೌಟ್ ಪಂದ್ಯಗಳನ್ನು ಆಯೋಜಿಸುತ್ತಿದ್ದಾರೆ. ಈ ಮೂಲಕ 11 ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲ್ಲಿವೆ. ಅದರಲ್ಲೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುತ್ತಿರುವುದು ಮೈಸೂರಿನ ಜನತೆಗೆ ಎರಡನೇ ದಸರಾದ ರಂಗು ತರುವುದರಲ್ಲಿ ಯಾವುದೇ ಅನುಮಾನವಿಲ್ಲ.
Supa happy to announce that #CCL2025 is coming to #NammaMysuru .Two Semifinls and the final will be played at Mysuru on the 1st and 2nd of March.Thanks to #CCL and #KSCA for accommodating and rendering your support.
We, the #KarnatakaBulldozers, are looking forward to seeing…
— Kichcha Sudeepa (@KicchaSudeep) February 18, 2025
ಮಾಹಿತಿ ನೀಡಿದ ಕಿಚ್ಚ ಸುದೀಪ್
ಇನ್ನು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕಿಚ್ಚ ಸುದೀಪ್, ಮೈಸೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲ್ಲಿವೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ. ಸಿಸಿಎಲ್ ನಾಕೌಟ್ ಸುತ್ತಿನ ಪಂದ್ಯಗಳು ಅಂದರೆ ಸೆಮಿಫೈನಲ್ ಪಂದ್ಯಗಳು ಮಾರ್ಚ್ 1 ರಂದು ಹಾಗೂ ಫೈನಲ್ ಪಂದ್ಯ ಮಾರ್ಚ್ 2 ರಂದು ನಡೆಯಲ್ಲಿವೆ. ಮೈಸೂರಿನಲ್ಲಿ ಈ ನಾಕೌಟ್ ಪಂದ್ಯಗಳನ್ನು ಆಯೋಜಿಸಲು ಅನುವು ಮಾಡಿಕೊಟ್ಟ ಸಿಸಿಎಲ್ ಹಾಗೂ ಕೆಎಸ್ಸಿಎಗೆ ಧನ್ಯವಾದಗಳು. ನಾವು ನಿಮ್ಮೆಲ್ಲರನ್ನೂ ಅಲ್ಲಿ ನೋಡಲು ಎದುರು ನೋಡುತ್ತಿದ್ದೇವೆ. ಟಿಕೆಟ್‌ಗಳ ಲಭ್ಯತೆ ಮತ್ತು ಆನ್‌ಲೈನ್ ಮಾರಾಟ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ