7 ಸಿಕ್ಸ್ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
CPL 2024: ಕೆರಿಬಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ 7 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಏಳು ಸಿಕ್ಸ್ ಬಾರಿಸಿದರೂ ಪೊಲಾರ್ಡ್ ಬ್ಯಾಟ್ನಿಂದ ಒಂದೇ ಒಂದು ಫೋರ್ ಮೂಡಿಬಂದಿರಲಿಲ್ಲ. ಅಲ್ಲದೆ ಅಜೇಯ ಅರ್ಧಶತಕ ಬಾರಿಸಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯದಲ್ಲಿ ಕೀರನ್ ಪೊಲಾರ್ಸ್ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಅರ್ಧತಕದೊಂದಿಗೆ ರಣರೋಚಕ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಜಯಭೇರಿ ಬಾರಿಸಿದೆ. ಸಸೇಂಟ್ ಲೂಸಿಯಾದ ಡೇರೆನ್ ಸ್ಯಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟಿಕೆಆರ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಶಕ್ಕೆರೆ ಪ್ಯಾರಿಸ್ 33 ಎಸೆತಗಳಲ್ಲಿ 57 ರನ್ ಬಾರಿಸಿದರು.
ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಪೆವಿಲಿಯನ್ ಪರೇಡ್ನಿಂದ ಟಿಕೆಆರ್ ತಂಡವು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಕೀರನ್ ಪೊಲಾರ್ಡ್ ಭರ್ಜರಿ ಇನಿಂಗ್ಸ್ ಆಡಿದರು. ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ಪೊಲಾರ್ಡ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಇದಾಗ್ಯೂ ಕೊನೆಯ ಎರಡು ಓವರ್ಗಳಲ್ಲಿ 27 ರನ್ಗಳ ಅವಶ್ಯಕತೆಯಿತ್ತು.
ಮ್ಯಾಥ್ಯೂ ಫೋರ್ಡ್ ಎಸೆದ 19ನೇ ಓವರ್ನಲ್ಲಿ 4 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಕೀರನ್ ಪೊಲಾರ್ಡ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅಲ್ಲದೆ ಕೇವಲ 19 ಎಸೆತಗಳಲ್ಲಿ 7 ಸಿಕ್ಸರ್ನೊಂದಿಗೆ 52 ರನ್ ಸಿಡಿಸಿ ಕೀರನ್ ಪೊಲಾರ್ಡ್ 19.1 ಓವರ್ಗಳಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಟಿಕೆಆರ್ ತಂಡವು 4 ವಿಕೆಟ್ಗಳ ಜಯ ಸಾಧಿಸಿದೆ.
Published On - 11:03 am, Wed, 11 September 24