KKR Captain: ವಿದೇಶಿ ಆಟಗಾರನಲ್ಲ; ಕೆಕೆಆರ್ ತಂಡದ ನಾಯಕತ್ವವಹಿಸಿಕೊಂಡ ಎಡಗೈ ಬ್ಯಾಟರ್..!

|

Updated on: Mar 27, 2023 | 5:57 PM

IPL 2023: 16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿರವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್‌ಮೆಂಟ್ ತಂಡದ ನೂತನ ನಾಯಕನಾಗಿ ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರನ್ನು ಆಯ್ಕೆ ಮಾಡಿದೆ.

KKR Captain: ವಿದೇಶಿ ಆಟಗಾರನಲ್ಲ; ಕೆಕೆಆರ್ ತಂಡದ ನಾಯಕತ್ವವಹಿಸಿಕೊಂಡ ಎಡಗೈ ಬ್ಯಾಟರ್..!
ಕೆಕೆಆರ್ ತಂಡ
Follow us on

ಶ್ರೇಯಸ್ ಅಯ್ಯರ್ (Shreyas Iyer) ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಯಾರು ಮುನ್ನಡೆಸಲಿದ್ದಾರೆ? ಎಂಬ ಪ್ರಶ್ನೆಗೆ ಅಂತಿಮವಾಗಿ ಉತ್ತರ ಸಿಕ್ಕಿದೆ. 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್‌ಮೆಂಟ್ ತಂಡದ ನೂತನ ನಾಯಕನಾಗಿ ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ (Nitish Rana) ಅವರನ್ನು ಆಯ್ಕೆ ಮಾಡಿದೆ. ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೆಕೆಆರ್, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ ಎಂದು ಬರೆದುಕೊಂಡಿದೆ. ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಅಂದರೆ ಅಹಮದಾಬಾದ್ ಟೆಸ್ಟ್‌ನಲ್ಲಿ ಶ್ರೇಯಸ್ ಗಾಯದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಶ್ರೇಯಸ್ ಆಡಲಾಗಲಿಲ್ಲ. ಹೀಗಾಗಿ ಐಪಿಎಲ್‌ನಲ್ಲೂ ಶ್ರೇಯಸ್ ಆಡುವ ಬಗ್ಗೆ ಅನುಮಾನಗಳಿದ್ದವು. ಆದ್ದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್‌ಮೆಂಟ್ ನಾಯಕನನ್ನು ಆಯ್ಕೆ ಮಾಡಬೇಕಾದ ಒತ್ತಡಕ್ಕೆ ಸಿಲುಕಿತ್ತು.

ಸ್ಪರ್ಧೆಯಲ್ಲಿದ್ದ ನರೈನ್

ರಾಣಾಗೂ ಮೊದಲು ಕೆಕೆಆರ್ ತಂಡದ ನಾಯಕತ್ವ ಯಾರ ಹೆಗಲೆರಲಿದೆ ಎಂಬ ಪ್ರಶ್ನೆಗೆ ತುಂಬಾ ಹತ್ತಿರವಾಗಿದ್ದ ಉತ್ತರವೆಂದರೆ ಅದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಸುನೀಲ್ ನರೈನ್. 2012 ರಲ್ಲಿ ಫ್ರಾಂಚೈಸಿಗೆ ಸೇರಿದ ಸುನಿಲ್ ನರೈನ್ ಜೊತೆಗೆ ಹಂಗಾಮಿ ನಾಯಕತ್ವದ ರೇಸ್​ನಲ್ಲಿ ರಾಣಾ ಕೂಡ ಒಬ್ಬರಾಗಿದ್ದರು. ನರೈನ್, ಇತ್ತೀಚೆಗೆ ನಡೆದ ILT20 ಲೀಗ್‌ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಆ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿತ್ತು. ಅಲ್ಲದೆ ಈ ತಂಡ ಕೆಕೆಆರ್​ ಒಡೆತನದ ಮತ್ತೊಂದು ತಂಡವಾಗಿರುವುದರಿಂದ ನರೈನ್​ಗೆ ನಾಯಕತ್ವ ಸಿಗಲಿದೆ ಎಂಬ ಮಾತು ಕೇಳಲಾರಂಭಿಸಿತ್ತು.

‘ಮನಾಲಿ ಪ್ರವಾಸದ ಬಳಿಕ HIV ಟೆಸ್ಟ್ ಮಾಡಿಸಿಕೊಂಡಿದ್ದೆ’; ಅದೊಂದು ಘಟನೆ ನೆನೆದ ಶಿಖರ್ ಧವನ್

ರಾಜ್ಯ ತಂಡವನ್ನು ಮುನ್ನಡೆಸಿದ್ದಾರೆ

ಇನ್ನು ರಾಣಾ ದೇಶಿ ಟೂರ್ನಿಯಾದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 12 ಟಿ20 ಪಂದ್ಯಗಳಲ್ಲಿ ತನ್ನ ರಾಜ್ಯ ತಂಡ ದೆಹಲಿಯನ್ನು ಮುನ್ನಡೆಸಿದ್ದರು. ಇದರಲ್ಲಿ ತಂಡ ಎಂಟು ಗೆಲುವು ಮತ್ತು ನಾಲ್ಕು ಸೋಲಿನೊಂದಿಗೆ ಟೂರ್ನಿ ಮುಗಿಸಿತ್ತು. 2018 ರ ಮೊದಲ ಬಾರಿಗೆ ಕೆಕೆಆರ್ ಸೇರಿಕೊಂಡ ರಾಣಾ, ಈ ತಂಡದ ಪರ 74 ಪಂದ್ಯಗಳನ್ನು ಆಡಿ, 135.61 ಸ್ಟ್ರೈಕ್ ರೇಟ್‌ನಲ್ಲಿ 1744 ರನ್ ಬಾರಿಸಿದ್ದಾರೆ.

ಅವರ ಆಗಮನದವರೆಗೂ ನಿತೀಶ್ ಹಂಗಾಮಿ ನಾಯಕ

ಹಾಗೆಯೇ ಅಯ್ಯರ್ ಇಂಜುರಿ ಬಗ್ಗೆಯೂ ಅಪ್​ಡೇಟ್ ನೀಡಿರುವ ಮ್ಯಾನೆಜ್​ಮೆಂಟ್, ಐಪಿಎಲ್ 2023 ರ ಆವೃತ್ತಿಯಲ್ಲಿ ಶ್ರೇಯಸ್ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಅವರ ಆಗಮನದವರೆಗೂ ನಿತೀಶ್ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ನಿತೀಶ್​ಗೆ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ನಾಯಕತ್ವದ ಅನುಭವ ಇದೆ. ಹಾಗೆಯೇ 2018ರಿಂದ ತಂಡದಲ್ಲಿರುವ ನಿತೀಶ್ ಅವರ ಅನುಭವ ಉತ್ತಮ ಕೆಲಸ ಮಾಡಲಿದೆ ಎಂದು ಕೆಕೆಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Mon, 27 March 23