ಕೆಕೆಆರ್‌ನಲ್ಲಿ ಬೃಹತ್ ಡೀಲ್‌ಗೆ ಸಿದ್ಧತೆ; 200 ಕೋಟಿ ಬಿಸಿಸಿಐಗೆ, 3739 ಕೋಟಿ ಜೂಹಿ ಚಾವ್ಲಾ ಕುಟುಂಬಕ್ಕೆ

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹ-ಮಾಲೀಕ ಜಯ್ ಮೆಹ್ತಾ, ತಮ್ಮ ಶೇ.22.5ರಷ್ಟು ಪಾಲನ್ನು ಅಮೆರಿಕದ ಏರೆಸ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ₹3,739 ಕೋಟಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಒಪ್ಪಂದದಿಂದ ಕೆಕೆಆರ್‌ನ ಒಟ್ಟು ಮೌಲ್ಯ $1.78 ಬಿಲಿಯನ್‌ಗೆ ಏರಲಿದೆ. ಸಂಪೂರ್ಣ ನಗದು ವ್ಯವಹಾರಕ್ಕೆ ಬಿಸಿಸಿಐ ಅನುಮತಿ ಅಗತ್ಯವಿದ್ದು, ಬಿಸಿಸಿಐಗೂ ₹200 ಕೋಟಿ ಆದಾಯ ಬರಲಿದೆ.

ಕೆಕೆಆರ್‌ನಲ್ಲಿ ಬೃಹತ್ ಡೀಲ್‌ಗೆ ಸಿದ್ಧತೆ; 200 ಕೋಟಿ ಬಿಸಿಸಿಐಗೆ, 3739 ಕೋಟಿ ಜೂಹಿ ಚಾವ್ಲಾ ಕುಟುಂಬಕ್ಕೆ
ಕೆಕೆಆರ್ ತಂಡದ ಮಾಲೀಕರು

Updated on: Nov 18, 2026 | 3:23 PM

2027 ರ ಐಪಿಎಲ್ ಮಿನಿ ಹರಾಜಿಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿರುವ ನಡುವೆ ಕೆಕೆಆರ್ ಪಾಳಯದಿಂದ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಪತಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕ ಜಯ್ ಮೆಹ್ತಾ ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಕೆಕೆಆರ್ ತಂಡದಲ್ಲಿ ಶೇ.45ರಷ್ಟು ಪಾಲು ಹೊಂದಿರುವ ಜಯ್ ಮೆಹ್ತಾ, ಅದರಲ್ಲಿ ಶೇ.22.5ರಷ್ಟು ಪಾಲನ್ನು ಅಮೆರಿಕದ ಹೂಡಿಕೆ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಅಮೆರಿಕದ ಹೂಡಿಕೆ ನಿರ್ವಹಣಾ ಸಂಸ್ಥೆ ‘ಏರೆಸ್ ಮ್ಯಾನೇಜ್‌ಮೆಂಟ್’ ಈ ಷೇರುಗಳನ್ನು ಖರೀದಿಸಲು ಮುಂದಾಗಿದೆ. ಈ ಸಂಸ್ಥೆ ಜಾಗತಿಕ ಕ್ರೀಡಾ ಕ್ಷೇತ್ರದಲ್ಲೂ ಹೂಡಿಕೆ ಮಾಡಿದೆ. ಇಂಗ್ಲೆಂಡ್‌ನ ಚೆಲ್ಸಿಯಾ ಫುಟ್‌ಬಾಲ್ ಕ್ಲಬ್ ಹಾಗೂ ಅಮೆರಿಕದ ಎನ್‌ಎಫ್‌ಎಲ್‌ನ ಮಿಯಾಮಿ ಡಾಲ್ಫಿನ್ಸ್ ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳಲ್ಲಿ ಈ ಕಂಪನಿಯ ಹೂಡಿಕೆಯಿದೆ.

Loading...

3,739 ಕೋಟಿಗೆ ಮಾರಾಟ

ಕ್ರಿಕ್‌ಬಜ್ ವರದಿಯ ಪ್ರಕಾರ, ಜಯ್ ಮೆಹ್ತಾ ಅವರು ಕೆಕೆಆರ್‌ನಲ್ಲಿನ ಶೇ.22.5ರಷ್ಟು ಪಾಲನ್ನು ಸುಮಾರು 400 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡುತ್ತಿದ್ದಾರೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದರ ಮೌಲ್ಯ ಬರೋಬ್ಬರಿ 3,739 ಕೋಟಿ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಟ್ಟು ಮೌಲ್ಯ ಸುಮಾರು 1.78 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 16,634 ಕೋಟಿ.

ಜಯ್ ಮೆಹ್ತಾ ಮತ್ತು ಅವರ ಪತ್ನಿ ಜೂಹಿ ಚಾವ್ಲಾ ಜೊತೆಗೆ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಕೆಕೆಆರ್ ತಂಡದ ಮಾಲೀಕತ್ವ ಹೊಂದಿದ್ದಾರೆ. ತಂಡದಲ್ಲಿ ಶಾರುಖ್ ಖಾನ್ ಶೇ.55ರಷ್ಟು ಪಾಲು ಹೊಂದಿದ್ದರೆ, ಜಯ್ ಮೆಹ್ತಾ ಶೇ.45ರಷ್ಟು ಪಾಲು ಹೊಂದಿದ್ದಾರೆ. 2007ರಲ್ಲಿ ಶಾರುಖ್ ಖಾನ್, ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಒಟ್ಟಾಗಿ ‘ನೈಟ್ ರೈಡರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯನ್ನು ಸ್ಥಾಪಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಖರೀದಿಸಿದ್ದರು.

ಧೋನಿಯನ್ನು ‘ತಲಾ’ ಎಂದು ಕರೆಯುವುದೇಕೆ? ಈ ಹೆಸರಿನ ಹಿಂದಿದೆ ದೊಡ್ಡ ಕಥೆ

ಸಂಪೂರ್ಣ ಹಣ ನಗದು ರೂಪದಲ್ಲಿ ಪಾವತಿ

ಈ ಷೇರು ಮಾರಾಟದ ಒಪ್ಪಂದದ ಮತ್ತೊಂದು ವಿಶೇಷವೆಂದರೆ, ಸಂಪೂರ್ಣ ವ್ಯವಹಾರ ನಗದು ರೂಪದಲ್ಲಿ ನಡೆಯಲಿದೆ ಎನ್ನಲಾಗಿದೆ. ಅಂದರೆ ಒಪ್ಪಂದ ಅಂತಿಮಗೊಂಡರೆ ಜಯ್ ಮೆಹ್ತಾ ಅವರಿಗೆ ಬರೋಬ್ಬರಿ 3,739 ಕೋಟಿ ಹಣ ನಗದು ರೂಪದಲ್ಲಿ ಸಿಗಲಿದೆ. ಆದರೆ ಈ ವ್ಯವಹಾರ ಪೂರ್ಣಗೊಳ್ಳಲು ಬಿಸಿಸಿಐ ಅನುಮತಿ ಕಡ್ಡಾಯವಾಗಿದೆ. ಹೊಸ ಹೂಡಿಕೆದಾರರ ಹಿನ್ನೆಲೆ ಹಾಗೂ ವಿವರಗಳನ್ನು ಬಿಸಿಸಿಐ ಪರಿಶೀಲಿಸಿದ ಬಳಿಕವಷ್ಟೇ ಒಪ್ಪಂದಕ್ಕೆ ಅಂತಿಮ ಒಪ್ಪಿಗೆ ಸಿಗಲಿದೆ.

ಇನ್ನು ಈ ವ್ಯವಹಾರದ ಮೂಲಕ ಬಿಸಿಸಿಐಗೂ ದೊಡ್ಡ ಮೊತ್ತದ ಹಣ ಸಿಗಲಿದೆ. ಒಪ್ಪಂದದ ಒಟ್ಟು ಮೌಲ್ಯದ ಶೇ.5ರಷ್ಟು ಮೊತ್ತ ಬಿಸಿಸಿಐಗೆ ಪಾವತಿಯಾಗಲಿದೆ ಎಂದು ವರದಿಯಾಗಿದೆ. ಇದರ ಪ್ರಕಾರ ಬಿಸಿಸಿಐಗೆ ಸುಮಾರು 20 ಮಿಲಿಯನ್ ಡಾಲರ್, ಅಂದರೆ ಅಂದಾಜು 200 ಕೋಟಿ ಆದಾಯ ಬರಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Wed, 18 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us