ಐಪಿಎಲ್ನಲ್ಲಿ ಭಾನುವಾರ ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್-2022 ರಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ . ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಕೇವಲ 15 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಇದೀಗ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ಗೆ ಸೋಲುಣಿಸಲು ಸಜ್ಜಾಗಿದೆ. ಅತ್ತ ಮೂರು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡರಲ್ಲಿ ಸೋತು ಒಂದರಲ್ಲಿ ಗೆದ್ದಿದೆ. ಹೀಗಾಗಿ ಕೆಕೆಆರ್ ವಿರುದ್ದ ಗೆಲ್ಲುವ ಮೂಲಕ ಜಯದ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ.
ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದರೆ ಕಳೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮತ್ತು ಎನ್ರಿಕ್ ನಾರ್ಕಿಯಾ ತಂಡಕ್ಕೆ ಮರಳಿದ್ದರಿಂದ ಡೆಲ್ಲಿ ತಂಡ ಬಲಿಷ್ಠವಾಗಿದೆ. ಹೀಗಾಗಿ ಕೆಕೆಆರ್ ಕಠಿಣ ಪೈಪೋಟಿ ನೀಡಬೇಕಾಗಿ ಬರಬಹುದು. ಅಷ್ಟೇ ಅಲ್ಲದೆ ಈ ಪಂದ್ಯಕ್ಕಾಗಿ ಡೆಲ್ಲಿ ತಂಡದಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಏಕೆಂದರೆ ಇದುವರೆಗೆ ರೋವ್ಮನ್ ಪೊವೆಲ್ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅವರ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್‌ಗೆ ಅವಕಾಶ ಸಿಗಬಹುದು. ಆದರೆ ಮಿಚೆಲ್ ಮಾರ್ಷ್ ಆಡಲು ಫಿಟ್ ಆಗಿದ್ದಾರೋ ಇಲ್ಲವೋ ಎಂಬುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಅವರು ಮಾರ್ಷ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಕೆಕೆಆರ್ ವಿರುದ್ದ ಕಣಕ್ಕಿಳಿಯುವ ಸಾಧ್ಯತೆಯಿದೆ.
ಕೋಲ್ಕತ್ತಾ ತಂಡದಲ್ಲಿ ಬದಲಾವಣೆಯಾಗಲಿದೆಯೇ?
ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನುಮಾನ. ಏಕೆಂದರೆ ತಂಡವು ಗೆಲುವಿನ ಲಯದಲ್ಲಿದ್ದು, ಹೀಗಾಗಿ ಪ್ಲೇಯಿಂಗ್ 11 ಬದಲಿಸಲು ಮುಂದಾಗುವುದಿಲ್ಲ ಎನ್ನಬಹುದು. ಇದಾಗ್ಯೂ ಆಟಗಾರನಿಗೆ ಗಾಯವಾದರೆ ಪ್ಲೇಯಿಂಗ್ 11 ವಿಭಿನ್ನವಾಗಿರುತ್ತದೆ. ಆದರೆ ಮತ್ತೊಂದೆಡೆ ಅಜಿಂಕ್ಯ ರಹಾನೆ ಅವರ ಫಾರ್ಮ್ ತಂಡಕ್ಕೆ ಚಿಂತೆಯ ವಿಷಯವಾಗಿರಬಹುದು. ಇದಾಗ್ಯೂ ಅನುಭವಕ್ಕೆ ಮಣೆಹಾಕಿ ಅವರನ್ನೇ ಮುಂದುವರೆಸುವ ಸಾಧ್ಯತೆಯಿದೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11:
ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ರಸಿಖ್ ಸಲಾಮ್, ಉಮೇಶ್ ಯಾದವ್.
ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಅನ್ರಿಕ್ ನಾರ್ಕಿಯಾ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?