IPL 2021, KKR vs RR: ಕೋಲ್ಕತ್ತಾ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರ: ಕುತೂಹಲ ಕೆರಳಿಸಿದ ಕೆಕೆಆರ್-ಆರ್​ಆರ್​ ಪಂದ್ಯ

| Updated By: Vinay Bhat

Updated on: Oct 07, 2021 | 8:11 AM

Kolkata Knight Riders vs Rajasthan Royals: ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 12 ಪಂದ್ಯಗಳಲ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021, KKR vs RR: ಕೋಲ್ಕತ್ತಾ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರ: ಕುತೂಹಲ ಕೆರಳಿಸಿದ ಕೆಕೆಆರ್-ಆರ್​ಆರ್​ ಪಂದ್ಯ
KKR vs RR
Follow us on

ಐಪಿಎಲ್ 2021 ರಲ್ಲಿ (IPL 2021) ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ (KKR vs RR) ತಂಡಗಳು ಮುಖಾಮುಖಿ ಆಗುತ್ತಿವೆ. ಕೆಕೆಆರ್​ಗೆ ಇದು ಮಹತ್ವದ ಪಂದ್ಯವಾಗಿದ್ದು, ಗೆದ್ದರೆ ಬಹುತೇಕ ಪ್ಲೇ ಆಫ್​ಗೆ ಲಗ್ಗೆಯಿಟ್ಟಂತೆ. ಯಾಕಂದ್ರೆ ಇತರೆ ತಂಡಗಳಿಗೆ ಹೋಲಿಸಿದರೆ ಕೋಲ್ಕತ್ತಾ ಉತ್ತಮ ರನ್​ರೇಟ್ ಕೂಡ ಹೊಂದಿದೆ. ಇತ್ತ ರಾಜಸ್ಥಾನ್ ಬಹುತೇಕ ಟೂರ್ನಿಯಿಂದ ಹೊರಬಿದ್ದಿದ್ದು ಅಧಿಕೃತವಾಗಬೇಕಷ್ಟೆ. ಕನಿಷ್ಠ ಪ್ರತಿಷ್ಠೆಗಾದರೂ ಆರ್​ಆರ್​ ಈ ಪಂದ್ಯವನ್ನು ಗೆಲ್ಲುವ ಯೋಜನೆಯಲ್ಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಒಟ್ಟು 13 ಪಂದ್ಯಗಳನ್ನು ಆಡಿದ್ದು ಆರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಏಳು ಪಂದ್ಯಗಳಲ್ಲಿ ಸೋತಿದೆ. ಒಟ್ಟು 12 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.294 ನೆಟ್​ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಆಡಿದ 13 ಪಂದ್ಯಗಳಲ್ಲಿ ಕೇವಲ ಐದರಲ್ಲಷ್ಟೆ ಗೆದ್ದಿದೆ. ಎಂಟು ಪಂದ್ಯಗಳಲ್ಲಿ ಸೋಲುಂಡಿದೆ. ಪಾಯಿಂಟ್ ಪಟ್ಟಿಯಲ್ಲಿ -0.737 ನೆಟ್​ರೇಟ್​ನೊಂದಿಗೆ ಏಳನೇ ಸ್ಥಾನದಲ್ಲಿದೆ.

ಕೆಕೆಆರ್ ತಂಡದಲ್ಲಿ ಆರಂಭಿಕ ಬ್ಯಾಟರ್​ಗಳು ರನ್ ಗಳಿಸುತ್ತಿದ್ದಾರೆ ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿ ಗೋಚರಿಸುತ್ತಿಲ್ಲ. ಶುಭ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಪವರ್ ಪ್ಲೇನಲ್ಲಿ ಸ್ಫೋಟಕ ಆಟವಾಡುತ್ತಾರೆ. ರಾಹುಲ್ ತ್ರಿಪಾಠಿ ಕೂಡ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಆದ್ರೆ, ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್​ನಲ್ಲಿದ್ದಾರೆ.

ಕೆಕೆಆರ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಬಹುತೇಕ ಪಂದ್ಯ ಬೌಲರ್​ಗಳಿಂದಲೇ ಕೋಲ್ಕತ್ತಾ ಪರ ವಾಲಿದ್ದಿದೆ. ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರೇ ಗೇಮ್ ಚೇಂಜಿಂಗ್ ಮೂಮೆಂಟ್ ತಂದುಕೊಡುತ್ತಿದ್ದಾರೆ. ಟಿಮ್ ಸೌಥೀ ಹಾಗೂ ಲೂಕಿ ಫರ್ಗುಸನ್ ತಂಡಕ್ಕೆ ಅಲ್ಪ ಮಟ್ಟದಲ್ಲಿ ನೆರವಾಗುತ್ತಿದ್ದಾರೆ.

ಇತ್ತ ರಾಜಸ್ಥಾನ್‌ ರಾಯಲ್ಸ್‌ ಚೆನ್ನೈ ವಿರುದ್ಧ ನಡೆಸಿದ ಸ್ಫೋಟಕ ಬ್ಯಾಟಿಂಗ್ ಕಳೆದ ಪಂದ್ಯದಲ್ಲಿ ಮರೆಯಾಗಿತ್ತು. ಆದರೂ ಎವಿನ್ ಲೆವಿಸ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಲಯದಲ್ಲಿದ್ದು ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲರು. ಸಂಜು ಸ್ಯಾಮ್ಸನ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಶಿವಂ ದುಬೆಯಿಂದ ಮತ್ತೊಂದಯ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬರಬೇಕಿದೆ. ಇವರಿಗೆ ಲ್ಯಾಮ್ ಲಿವಿಂಗ್​ಸ್ಟೋನ್, ಲುಮ್ರೋರ್, ರಾಹುಲ್ ತೇವಾಟಿಯ ಸಾಥ್ ನೀಡಬೇಕಷ್ಟೆ. ಬೌಲಿಂಗ್​ನಲ್ಲಿ ಮುಸ್ತಫಿಜುರ್ ರೆಹ್ಮಾನ್, ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕರಿಯಾ ಇನ್ನಷ್ಟು ಬಲ ಹಾಕಬೇಕಿದೆ. ಕೆಕೆಆರ್ ಪ್ಲೇ ಕನಸಿಗೆ ತಣ್ಣೀರೆರಚಲು ರಾಜಸ್ಥಾನಕ್ಕೆ ದೊಡ್ಡ ಕಷ್ಟವೇನಿಲ್ಲ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 12 ಪಂದ್ಯಗಳಲ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021, CSK vs PBKS: ಚೆನ್ನೈ-ಪಂಜಾಬ್​ಗೆ ಲೀಗ್ ಹಂತದ ಕೊನೇಯ ಪಂದ್ಯ: ಗೆದ್ದೇ ಬಿಡುತ್ತಾ ರಾಹುಲ್ ಪಡೆ?

(KKR vs RR IPL 2021 Eoin Morgan Kolkata Knight Riders faces Sanju Samson Rajasthan Royals)