KL Rahul: ಐಪಿಎಲ್​ಗಾಗಿ ಕಸರತ್ತು ಶುರು ಮಾಡಿದ ಕೆಎಲ್ ರಾಹುಲ್

| Updated By: ಝಾಹಿರ್ ಯೂಸುಫ್

Updated on: Mar 07, 2024 | 7:47 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಮಾರ್ಚ್ 22 ರಿಂದ ಶುರುವಾಗಲಿದೆ. ಇದಕ್ಕೂ ಮುನ್ನ ಸಂಪೂರ್ಣ ಫಿಟ್​ನೆಸ್ ಸಾಬೀತುಪಡಿಸಿ ನ್ಯಾಷನಲ್ ಕ್ರಿಕೆಟ್​ ಅಕಾಡೆಮಿಯಿಂದ ಕ್ಲಿಯರೆನ್ಸ್ ಪಡೆಯಬೇಕಾದ ಅನಿವಾರ್ಯತೆ ಕೆಎಲ್ ರಾಹುಲ್ ಮುಂದಿದೆ. ಹೀಗಾಗಿ ಇದೀಗ ಬೆಂಗಳೂರಿನ ಎನ್​ಸಿಎ ನಲ್ಲಿ ರಾಹುಲ್ ಅಭ್ಯಾಸ ಆರಂಭಿಸಿದ್ದಾರೆ.

KL Rahul: ಐಪಿಎಲ್​ಗಾಗಿ ಕಸರತ್ತು ಶುರು ಮಾಡಿದ ಕೆಎಲ್ ರಾಹುಲ್
KL Rahul
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಕೆಎಲ್ ರಾಹುಲ್ (KL Rahul) ಇದೀಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕೆಎಲ್​ಆರ್​ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು.

ಇದಾಗ್ಯೂ ಅವರು 5ನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಸಂಪೂರ್ಣ ಫಿಟ್​ ಆದ ಬಳಿಕ ಕೂಡ ನೋವಿನ ಸಮಸ್ಯೆಯು ತಲೆದೂರಿದ್ದರಿಂದ ಅವರು ಲಂಡನ್​ನಲ್ಲಿ ಉನ್ನತ ವೈದ್ಯಕೀಯ ತಜ್ಞರನ್ನು ಭೇಟಿಯಾಗಿದ್ದರು. ಇದೀಗ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ್ದಾರೆ.

ಅಲ್ಲದೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಬೇಕಿದ್ದು, ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಅವರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಬಹುದು.

ಹೀಗಾಗಿ ಇದೀಗ ಎನ್​ಸಿಎನಲ್ಲಿರುವ ಜಿಮ್​ನಲ್ಲಿ ಕೆಎಲ್ ರಾಹುಲ್ ಕಸರತ್ತು ಆರಂಭಿಸಿದ್ದು, ಶೀಘ್ರದಲ್ಲೇ ಫಿಟ್​ನೆಸ್​ ಟೆಸ್ಟ್​ಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ ಮುಂಬರುವ ಐಪಿಎಲ್​ನಲ್ಲಿ ರಾಹುಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

ಬಿಸಿಸಿಐ ನಿಯಮ:

ಬಿಸಿಸಿಐ ನಿಯಮದ ಪ್ರಕಾರ ಟೀಮ್ ಇಂಡಿಯಾ ಆಟಗಾರರು ಗಾಯಗೊಂಡ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಫಿಟ್​ನೆಸ್ ಟೆಸ್ಟ್ ಸರ್ಟಿಫಿಕೇಟ್ ಪಡೆಯಬೇಕು.

ಒಂದು ವೇಳೆ ಫಿಟ್​ನೆಸ್ ಟೆಸ್ಟ್​ನಲ್ಲಿ ವಿಫಲರಾದರೆ, ಅವರಿಗೆ ಐಪಿಎಲ್​ ಆಡಲು ಅನುಮತಿ ನೀಡಲಾಗುವುದಿಲ್ಲ. ಇದೇ ಕಾರಣದಿಂದಾಗಿ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಸೇರಿದಂತೆ ಕೆಲ ಆಟಗಾರರು ಎನ್​ಸಿಎನಲ್ಲಿ ಕಾಣಿಸಿಕೊಂಡಿದ್ದಾರೆ.

ಲಕ್ನೋ ತಂಡದ ನಾಯಕ:

ಈ ಬಾರಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಇವರ ಜೊತೆಗೆ ಉಪನಾಯಕನಾಗಿ ನಿಕೋಲಸ್ ಪೂರನ್ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಉಪನಾಯಕರಾಗಿ ಕೃಣಾಲ್ ಪಾಂಡ್ಯ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ವೆಸ್ಟ್ ಇಂಡೀಸ್​ನ ನಿಕೋಲಸ್ ಪೂರನ್​ಗೆ ಉಪನಾಯಕತ್ವ ನೀಡಲಾಗಿದೆ.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

ಇನ್ನು ಕಳೆದ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ಹಾಗೆಯೇ ಕರ್ನಾಟಕದ ಮತ್ತೋರ್ವ ಆಟಗಾರ ಕೃಷ್ಣ ಗೌತಮ್ ಕೂಡ ಎಲ್​ಎಸ್​ಜಿ ಪರ ಕಣಕ್ಕಿಳಿಯಲಿದ್ದಾರೆ.