ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ (KL Rahul) ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾಗಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಮೂಲಕ ಕ್ಲಿಯರೆನ್ಸ್ ಪಡೆದುಕೊಂಡಿದ್ದಾರೆ. ಈ ಕ್ಲಿಯರೆನ್ಸ್ನೊಂದಿಗೆ ಕೆಎಲ್ ರಾಹುಲ್ ಇದೀಗ ಶ್ರೀಲಂಕಾಗೆ ತೆರಳಲು ಅಣಿಯಾಗಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿದ್ದ ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಕೂಡ ಸ್ಥಾನ ಪಡೆದಿದ್ದರು. ಆದರೆ ಅವರು ಸಂಪೂರ್ಣ ಫಿಟ್ನೆಸ್ ಹೊಂದಿಲ್ಲದ ಕಾರಣ ಭಾರತ ತಂಡದೊಂದಿಗೆ ಶ್ರೀಲಂಕಾಗೆ ಪ್ರಯಾಣಿಸಿರಲಿಲ್ಲ.
ಇದೇ ಕಾರಣದಿಂದಾಗಿ ಪಾಕಿಸ್ತಾನ್ ಹಾಗೂ ನೇಪಾಳ ವಿರುದ್ಧದ ಪಂದ್ಯಕ್ಕೆ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದರು. ಇದೀಗ ನ್ಯಾಷನಲ್ ಆಕಾಡೆಮಿಯಲ್ಲಿ ನಡೆದ ಫಿಟ್ನೆಸ್ ಟೆಸ್ಟ್ನಲ್ಲಿ ರಾಹುಲ್ ಸಂಪೂರ್ಣ ಫಿಟ್ನೆಸ್ ಹೊಂದಿರುವುದು ಸಾಬೀತಾಗಿದೆ.
ಹೀಗಾಗಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲು ಅವರಿಗೆ ಕ್ಲಿಯರೆನ್ಸ್ ನೀಡಲಾಗಿದೆ. ಅದರಂತೆ ಭಾನುವಾರ ಅಥವಾ ಸೋಮವಾರ ಕೆಎಲ್ ರಾಹುಲ್ ಶ್ರೀಲಂಕಾಗೆ ಪ್ರಯಾಣಿಸುವ ಸಾಧ್ಯತೆಯಿದೆ.
ಸೂಪರ್-4 ಹಂತದಲ್ಲಿ ಕಣಕ್ಕೆ:
ಕೆಎಲ್ ರಾಹುಲ್ ಭಾನುವಾರ ಅಥವಾ ಸೋಮವಾರ ಶ್ರೀಲಂಕಾಗೆ ತಲುಪಿದರೂ ಅವರು ನೇಪಾಳ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಏಕೆಂದರೆ ಭಾರತ-ನೇಪಾಳ ನಡುವಣ ಪಂದ್ಯವು ಸೆಪ್ಟೆಂಬರ್ 4 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ಅವರು ಅಲಭ್ಯರಾಗುವುದು ಖಚಿತವಾಗಿದೆ.
ಇನ್ನು ನೇಪಾಳ ವಿರುದ್ಧ ಟೀಮ್ ಇಂಡಿಯಾ ಗೆದ್ದರೆ ಅವರು ಸೂಪರ್-4 ಹಂತದಲ್ಲಿ ಕಣಕ್ಕಿಳಿಯಲಿದ್ದಾರೆ. ಅಂದರೆ ಟೀಮ್ ಇಂಡಿಯಾ ಸೂಪರ್ ಫೋರ್ ಹಂತಕ್ಕೇರಿದರೆ ಸೆಪ್ಟೆಂಬರ್ 10 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).