ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ಗೆ ಅಗ್ನಿ ಪರೀಕ್ಷೆ..!
Asia Cup 2023: ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಈ ಟೂರ್ನಿಯ ಮೂಲಕ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಈ ಇಬ್ಬರು ಆಟಗಾರರು ವಿಫಲವಾದರೆ, ಏಕದಿನ ವಿಶ್ವಕಪ್ ತಂಡದಲ್ಲೂ ಚಾನ್ಸ್ ಸಿಗುವುದು ಅನುಮಾನ. ಇದೇ ಕಾರಣದಿಂದಾಗಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯಯಿದೆ.
ಏಷ್ಯಾಕಪ್ಗಾಗಿ ಕೌಂಟ್ ಡೌನ್ ಶುರುವಾಗಿದೆ. ಆಗಸ್ಟ್ 30 ರಿಂದ ಪ್ರಾರಂಭವಾಗಲಿರುವ ಈ ಟೂರ್ನಿಗಾಗಿ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳನ್ನುಈಗಾಗಲೇ ಘೋಷಿಸಲಾಗಿದೆ. ಇದಾಗ್ಯೂ ಟೀಮ್ ಇಂಡಿಯಾ ಬಳಗವನ್ನು ಘೋಷಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್. ಕಳೆದ ಕೆಲ ತಿಂಗಳುಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಈ ಇಬ್ಬರು ಆಟಗಾರರ ಫಿಟ್ನೆಸ್ ವರದಿಗಾಗಿ ಬಿಸಿಸಿಐ ಆಯ್ಕೆ ಸಮಿತಿ ಕಾಯುತ್ತಿದೆ. ಈ ವರದಿ ಬಂದ ಬೆನ್ನಲ್ಲೇ ಏಷ್ಯಾಕಪ್ಗಾಗಿ ಭಾರತ ತಂಡವನ್ನು ಘೋಷಿಸಲಾಗುತ್ತದೆ.
ರಾಹುಲ್-ಅಯ್ಯರ್ಗೆ ಅಗ್ನಿ ಪರೀಕ್ಷೆ:
ಮುಂಬರುವ ಏಕದಿನ ವಿಶ್ವಕಪ್ನ್ನು ದೃಷ್ಟಿಯಲ್ಲಿಟ್ಟುಕೊಂಡು ಏಷ್ಯಾಕಪ್ಗಾಗಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ರಾಹುಲ್ ಹಾಗೂ ಶ್ರೇಯಸ್ ಸಂಪೂರ್ಣ ಫಿಟ್ನೆಸ್ ಹೊಂದಿಲ್ಲದಿದ್ದರೆ ಏಷ್ಯಾಕಪ್ನಿಂದ ಮಾತ್ರವಲ್ಲದೆ, ಏಕದಿನ ವಿಶ್ವಕಪ್ ತಂಡದಿಂದಲೂ ಹೊರಬೀಳಬಹುದು. ಹೀಗಾಗಿಯೇ ಏಷ್ಯಾ ಕಪ್ಗೂ ಮುನ್ನ ನಡೆಯಲಿರುವ ಫಿಟ್ನೆಸ್ ಟೆಸ್ಟ್ ರಾಹುಲ್ ಹಾಗೂ ಅಯ್ಯರ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಮಾರ್ಪಟ್ಟಿದೆ.
- ಐಪಿಎಲ್ 2023ರಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ಗಾಯಗೊಂಡಿದ್ದರು. ಇದಾದ ಬಳಿಕ ಸರ್ಜರಿಗೆ ಒಳಗಾಗಿದ್ದ ಇದೀಗ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅದಕ್ಕೂ ಮುನ್ನ ಫಿಟ್ನೆಸ್ ಟೆಸ್ಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಡಬೇಕಾಗುತ್ತದೆ.
- ಐಪಿಎಲ್ ಆರಂಭಕ್ಕೂ ಮುನ್ನವೇ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಈ ಬಾರಿ ಕೆಕೆಆರ್ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅಯ್ಯರ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದರೆ ಅವರು 50 ಓವರ್ಗಳ ಪಂದ್ಯವಾಡುವಷ್ಟು ಫಿಟ್ನೆಸ್ ಹೊಂದಿದ್ದಾರಾ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಕೆಎಲ್ಆರ್-ಅಯ್ಯರ್ ಅನಿವಾರ್ಯ:
ಟೀಮ್ ಇಂಡಿಯಾದ ಪ್ರಸ್ತುತ ಬ್ಯಾಟಿಂಗ್ ಲೈನಪ್ ಗಮನಿಸಿದರೆ, ಮಧ್ಯಮ ಕ್ರಮಾಂಕವು ಅಂದುಕೊಂಡಷ್ಟು ಬಲಿಷ್ಠವಾಗಿಲ್ಲ. ಅದರಲ್ಲೂ 4ನೇ ಕ್ರಮಾಂಕದಲ್ಲಿ ಹಲವು ಪ್ರಯೋಗ ನಡೆಸಲಾಗಿದ್ದರೂ ಯಾವುದೇ ಬ್ಯಾಟರ್ ಸ್ಥಿರ ಪ್ರದರ್ಶನ ನೀಡಿಲ್ಲ. ಹೀಗಾಗಿಯೇ ಮಧ್ಯಮ ಕ್ರಮಾಂಕಕ್ಕೆ ಅನುಭವಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅನಿವಾರ್ಯ.
ಸೂರ್ಯ-ಸಂಜುಗೆ ಅವಕಾಶ:
ಒಂದು ವೇಳೆ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಏಷ್ಯಾಕಪ್ಗೆ ಆಯ್ಕೆಯಾಗದಿದ್ದರೆ, ಈ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳುವುದು ಖಚಿತ. ಅಲ್ಲದೆ ಏಷ್ಯಾಕಪ್ನಲ್ಲಿ ಈ ಇಬ್ಬರು ಆಟಗಾರರು ಮಿಂಚಿದರೆ, ಏಕದಿನ ವಿಶ್ವಕಪ್ನಲ್ಲೂ ಸಂಜು-ಸೂರ್ಯ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಮುಂದುವರೆಯುವುದರಲ್ಲಿ ಅನುಮಾನವೇ ಇಲ್ಲ.
ಏಷ್ಯಾಕಪ್ ಯಾವಾಗ ಶುರು?
ಆಗಸ್ಟ್ 30 ರಿಂದ ಏಷ್ಯಾಕಪ್ ಟೂರ್ನಿ ಶುರುವಾಗಲಿದೆ. ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದ್ದು, ಇದಾಗ್ಯೂ ಪಾಕ್ನಲ್ಲಿ ಟೂರ್ನಿ ಆಡಲು ಭಾರತ ಹಿಂದೇಟು ಹಾಕಿದೆ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ನಡೆಸಲು ಪಾಕಿಸ್ತಾನ್ ಯೋಜನೆ ರೂಪಿಸಿದೆ.
ಏನಿದು ಹೈಬ್ರಿಡ್ ಮಾದರಿ?
ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಎರಡು ದೇಶಗಳಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಆಯೋಜನೆಯ ಹಕ್ಕನ್ನು ಹೊಂದಿರುವ ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆಯಲಿದೆ. ಹಾಗೆಯೇ ಫೈನಲ್ ಸೇರಿದಂತೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ.
ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ
ಭಾರತ-ಪಾಕಿಸ್ತಾನ್ ಮುಖಾಮುಖಿ:
ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡುತ್ತಿರುವುದು ವಿಶೇಷ. ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.