ಕೆರಿಬಿಯನ್ ಪ್ರವಾಸದ ಬಳಿಕ ಭಾರತ ಕ್ರಿಕೆಟ್ ತಂಡ ಇದೀಗ ಕೆಲ ದಿನಗಳ ವಿಶ್ರಾಂತಿ ಪಡೆದು ಜಿಂಬಾಬ್ವೆ ನಾಡಿಗೆ ಕಾಲಿಟ್ಟಿದೆ. ಶನಿವಾರ ಕೆಎಲ್ ರಾಹುಲ್ ನೇತೃತ್ವದ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆಗೆ (India vs Zimbabwe) ತಲುಪಿದೆ. ಜಿಂಬಾಬ್ವೆ ಕ್ರಿಕೆಟ್ ತನ್ನ ಟ್ವಿಟರ್ ಖಾತೆಯಲ್ಲಿ ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಸ್ಟಾರ್ ಆಟಗಾರರು ವಿಮಾನ ನಿಲ್ದಾಣದಿಂದ ಆಗಮಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ರೋಹಿತ್ ಶರ್ಮಾ (Rohit Sharma), ರಿಷಭ್ ಪಂತ್, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಕೆಲ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇಂಜುರಿಯಿಂದ ಗುಣಮುಖರಾಗಿ ಕೆಎಲ್ ರಾಹುಲ್ (KL Rahul) ಕೂಡ ಫಿಟ್ ಆಗಿದ್ದು ಜಿಂಬಾಬ್ವೆ ವಿರುದ್ಧದ ಸರಣಿಗೆ ತಡವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಬಿಸಿಸಿಐ ಇವರನ್ನು ನಾಯಕನಾಗಿ ಆಯ್ಕೆ ಮಾಡಿದೆ. ಶಿಖರ್ ಧವನ್ ಉಪ ನಾಯಕನಾಗಿದ್ದಾರೆ.
ವಿಶೇಷ ಎಂದರೆ ಭಾರತ ತಂಡವು 6 ವರ್ಷಗಳ ಬಳಿಕ ಜಿಂಬಾಬ್ವೆ ನಾಡಿಗೆ ತೆರಳಿದೆ. ಈ ಹಿಂದೆ ಎಂಎಸ್ ಧೋನಿ ನೇತೃತ್ವದ ತಂಡವು 2016 ರಲ್ಲಿ ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಜಿಂಬಾಬ್ವೆಯಲ್ಲಿ ಆಡಿತ್ತು. ಈ ಎರಡೂ ಸರಣಿಯಲ್ಲಿ ಅಂದು ಭಾರತ ತಂಡ ಗೆಲುವು ದಾಖಲಿಸಿತ್ತು. ಇದೀಗ 6 ವರ್ಷಗಳ ಬಳಿಕ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿದೆ.
They are here now . . . ?? have just landed in Harare ahead of the three-match ODI series against ?? scheduled for 18, 20 and 22 August at Harare Sports Club #WelcomeIndia | #ZIMvIND | #VisitZimbabwe pic.twitter.com/lViHCYPSPL
— Zimbabwe Cricket (@ZimCricketv) August 13, 2022
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಮೂಲಕ ಸುದೀರ್ಘ ಗಾಯದ ನಂತರ ದೀಪಕ್ ಚಹಾರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಮಿಂಚು ಹರಿಸಿದ್ದ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಲಾಗಿದೆ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸಹ ಅವಕಾಶ ಪಡೆದುಕೊಂಡಿದ್ದಾರೆ. ಆದರೆ, ಸುಂದರ್ ಗಾಯಕ್ಕೆ ತುತ್ತಾದ ಪರಿಣಾಮ ಇವರ ಲಭ್ಯತೆ ಅನುಮಾನ ಎನ್ನಲಾಗಿದೆ.
ಐಸಿಸಿ ಸೂಪರ್ ಲೀಗ್ ಭಾಗವಾಗಿ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿವೆ. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್ 18, 20 ಹಾಗೂ 22ರಂದು ಪಂದ್ಯಗಳು ನಡೆಯಲಿವೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ. ಐಸಿಸಿ ಲೀಗ್ ಶ್ರೇಯಾಂಕದಲ್ಲಿ ಜಿಂಬಾಬ್ವೆ ಪ್ರಸ್ತುತ 12ನೇ ಸ್ಥಾನದಲ್ಲಿದೆ.
ಭಾರತ–ಜಿಂಬಾಬ್ವೆ ಸರಣಿ ವೇಳಾಪಟ್ಟಿ ಹೀಗಿದೆ:
ಆಗಸ್ಟ್ 18- ಮೊದಲ ಏಕದಿನ ಪಂದ್ಯ
ಆಗಸ್ಟ್ 20- ಎರಡನೇ ಏಕದಿನ ಪಂದ್ಯ
ಆಗಸ್ಟ್ 22- ಮೂರನೇ ಏಕದಿನ ಪಂದ್ಯ
ಈ ಎಲ್ಲಾ ಪಂದ್ಯಗಳು ಹರಾರೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 12:45ಕ್ಕೆ ಶುರುವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಕಾಣಲಿದೆ.
ಭಾರತ ತಂಡ: ಕೆ ಎಲ್ ರಾಹುಲ್(ನಾಯಕ), ಶಿಖರ್ ಧವನ್(ಉಪ ನಾಯಕ), ಋತುರಾಜ್ ಗಾಯಕ್ವಾಡ, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್(ವಿ.ಕೀ), ಸಂಜು ಸ್ಯಾಮನ್ಸ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್.
Published On - 10:17 am, Sun, 14 August 22