ಐಪಿಎಲ್ (IPL 2024) ಸೀಸನ್ 17 ರಲ್ಲಿ ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮ್ಯಾನೇಜ್ಮೆಂಟ್ನೊಂದಿಗೆ ಚರ್ಚಿಸಿದ್ದು, ಆರಂಭಿಕನ ಬದಲಾಗಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಇಚ್ಛಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬರುವ ಐಪಿಎಲ್ನಲ್ಲಿ ಆರಂಭಿಕ ಸ್ಥಾನದಿಂದ ಹಿಂಬಡ್ತಿ ಪಡೆಯಲು ಕೆಎಲ್ ರಾಹುಲ್ ನಿರ್ಧರಿಸಿದ್ದು, ಅದರಂತೆ 4ನೇ ಕ್ರಮಾಂಕದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಲಕ್ನೋ ಸೂಪರ್ ಜೈಂಟ್ಸ್ ಮ್ಯಾನೇಜ್ಮೆಂಟ್ ಜೊತೆ ಮಾತುಕತೆ ನಡೆಸಿದ್ದಾರೆ. ಅತ್ತ ಕಡೆಯಿಂದ ರಾಹುಲ್ಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ.
2016 ರಲ್ಲಿ ಐಪಿಎಲ್ ಆರ್ಸಿಬಿ ಪರ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಆ ಬಳಿಕ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕರಾಗಿ ಆಡಿದ್ದರು. ಆದರೆ ಈ ಬಾರಿಯ ವಿಶ್ವಕಪ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಹೀಗಾಗಿ ಟಿ20 ಕ್ರಿಕೆಟ್ನಲ್ಲೂ ಮಧ್ಯಮ ಕ್ರಮಾಂಕಕ್ಕೆ ಹೊಂದಿಕೊಳ್ಳಲು ಕೆಎಲ್ ರಾಹುಲ್ ಮುಂದಾಗಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನನ್ನು 4ನೇ ಕ್ರಮಾಂಕದಲ್ಲಿ ಎದುರು ನೋಡಬಹುದು.
ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಕ್ವಿಂಟನ್ ಡಿಕಾಕ್ ಹಾಗೂ ಕೈಲ್ ಮೇಯರ್ಸ್ನಂತಹ ಸ್ಟಾರ್ ಆಟಗಾರರಿದ್ದಾರೆ. ಹೀಗಾಗಿ ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯು ತಂಡದ ಸಮತೋಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎನ್ನಬಹುದು.
ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದಿರುವ ಕೆಎಲ್ ರಾಹುಲ್ ಟೆಸ್ಟ್ನಲ್ಲೂ ಗ್ಲೌಸ್ ತೊಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಬಗ್ಗೆ ಇಂಡಿಯಾ ಮ್ಯಾನೇಜ್ಮೆಂಟ್ ಜೊತೆ ರಾಹುಲ್ ಚರ್ಚಿಸಿದ್ದಾರೆ. ಈ ಮೂಲಕ ಪರಿಪೂರ್ಣ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳಲು ಕೆಎಲ್ಆರ್ ಬಯಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: IPL 2024: ಐಪಿಎಲ್ ಯಾವಾಗ ಶುರು? ಇಲ್ಲಿದೆ ಉತ್ತರ
ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೆ ಗೌತಮ್, ಕೃನಾಲ್ ಪಾಂಡ್ಯ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ಪ್ರೇರಕ್ ಮಂಕಡ್, ಯುಧ್ವೀರ್ ಸಿಂಗ್, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯಿ, ಯಶ್ ಥಾಕಿ , ಅಮಿತ್ ಮಿಶ್ರಾ, ನವೀನ್-ಉಲ್-ಹಕ್.