AUS vs PAK: ಪಾಕ್ ಬೌಲರ್​ಗಳ ಬೆಂಡೆತ್ತಿದ ವಾರ್ನರ್: ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ

Australia vs Pakistan, 1st Test: ಈ ಹಂತದಲ್ಲಿ ಶಾಹೀನ್ ಶಾ ಅಫ್ರಿದಿ ಎಸೆತದಲ್ಲಿ ಉಸ್ಮಾನ್ ಖ್ವಾಜಾ (41) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮಾರ್ನಸ್ ಲಾಬುಶೇನ್ (16) ಕೂಡ ಔಟಾದರು. ಇದಾಗ್ಯೂ ಡೇವಿಡ್ ವಾರ್ನರ್ ಅಬ್ಬರವನ್ನು ತಡೆಯಲು ಪಾಕ್​ ಬೌಲರ್​ಗಳಿಗೆ ಸಾಧ್ಯವಾಗಲಿಲ್ಲ.

AUS vs PAK: ಪಾಕ್ ಬೌಲರ್​ಗಳ ಬೆಂಡೆತ್ತಿದ ವಾರ್ನರ್: ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ
ವಾರ್ನರ್-ಬಾಬರ್
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 14, 2023 | 3:50 PM

ಪಾಕಿಸ್ತಾನ್ (Pakistan) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ (Australia) ಬೃಹತ್ ಮೊತ್ತ ಪೇರಿಸಿದೆ. ಪರ್ತ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಇನಿಂಗ್ಸ್ ಆರಂಭಿಸಿದ ಉಸ್ಮಾನ್ ಖ್ವಾಜಾ ಹಾಗೂ ಡೇವಿಡ್ ವಾರ್ನರ್ ಮೊದಲ ವಿಕೆಟ್​ಗೆ 126 ರನ್​ ಪೇರಿಸಿದರು.

ಈ ಹಂತದಲ್ಲಿ ಶಾಹೀನ್ ಶಾ ಅಫ್ರಿದಿ ಎಸೆತದಲ್ಲಿ ಉಸ್ಮಾನ್ ಖ್ವಾಜಾ (41) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮಾರ್ನಸ್ ಲಾಬುಶೇನ್ (16) ಕೂಡ ಔಟಾದರು. ಇದಾಗ್ಯೂ ಡೇವಿಡ್ ವಾರ್ನರ್ ಅಬ್ಬರವನ್ನು ತಡೆಯಲು ಪಾಕ್​ ಬೌಲರ್​ಗಳಿಗೆ ಸಾಧ್ಯವಾಗಲಿಲ್ಲ.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ ಕೇವಲ 125 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಬಳಿಕ ಕೂಡ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ವಾರ್ನರ್ 211 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 164 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಸ್ಟೀವ್ ಸ್ಮಿತ್ 30 ರನ್​ಗಳ ಕೊಡುಗೆ ನೀಡಿದರೆ, ಟ್ರಾವಿಸ್ ಹೆಡ್ 40 ರನ್ ಬಾರಿಸಿ ಔಟಾದರು. ಅದರಂತೆ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 5 ವಿಕೆಟ್ ಕಳೆದುಕೊಂಡು 346 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್ (15) ಹಾಗೂ ಅಲೆಕ್ಸ್​ ಕ್ಯಾರಿ (14) ಇದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಪಾಕಿಸ್ತಾನ್ ಪರ ಅಮೀರ್ ಜಮಾಲ್ 2 ವಿಕೆಟ್ ಪಡೆದರೆ, ಶಾಹೀನ್ ಶಾ ಅಫ್ರಿದಿ, ಖುರ್ರಂ ಶಹಜಾದ್ ಹಾಗೂ ಫಹೀಮ್ ಅಶ್ರಫ್ ತಲಾ ಒಂದು ವಿಕೆಟ್ ಕಬಳಿಸಿದರು.

ಆಸ್ಟ್ರೇಲಿಯಾ ಪ್ಲೇಯಿಂಗ್ 11 : ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಝಲ್​ವುಡ್.

ಇದನ್ನೂ ಓದಿ: IPL 2024 Auction: ಐಪಿಎಲ್ ಹರಾಜಿನಲ್ಲಿ ಕರ್ನಾಟಕದ 14 ಕ್ರಿಕೆಟಿಗರು

ಪಾಕಿಸ್ತಾನ್ ಪ್ಲೇಯಿಂಗ್ 11 : ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಶಾನ್ ಮಸೂದ್ (ನಾಯಕ), ಬಾಬರ್ ಆಝಂ, ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಆಘಾ, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಅಮೀರ್ ಜಮಾಲ್ ಮತ್ತು ಖುರ್ರಂ ಶಹಜಾದ್.

Published On - 3:49 pm, Thu, 14 December 23