ಮುಂಬರುವ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಟೀಂ ಇಂಡಿಯಾ ಹಾಲಿ ಕೋಚ್ ದ್ರಾವಿಡ್ (Rahul Dravid) ದಾಖಲೆ ಮುರಿಯುವ ಹೊಸ್ತಿನಲ್ಲಿದ್ದಾರೆ. 2022 ರ ಏಷ್ಯಾಕಪ್‌ನಲ್ಲಿ (Asia Cup 2022) ತಮ್ಮ ಹಳೆಯ ಪಾರ್ಮ್ಗೆ ಮರಳಿದ ಕೊಹ್ಲಿ, ಐದು ಪಂದ್ಯಗಳಲ್ಲಿ 276 ರನ್ ಗಳಿಸಿದರು. ಈ ಮೂಲಕ ಏಷ್ಯಾಕಪ್ 2022 ರಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆನಿಸಿಕೊಂಡರು. ಜೊತೆಗೆ ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು ಎನ್ನತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸುವ ಸಲುವಾಗಿ ಅಫ್ಘಾನಿಸ್ತಾನ ವಿರುದ್ಧ ಚೊಚ್ಚಲ T20 ಶತಕ ಸಿಡಿಸುವುದರೊಂದಿಗೆ ತಮ್ಮ ಶತಕಗಳ ಬರವನ್ನು ಕೊನೆಗೊಳಿಸಿದರು.
ಈಗ ಆಸೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಕೇವಲ 207 ರನ್ ಗಳಿಸಿದರೆ ಸಾಕು, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗುವ ಅವಕಾಶ ಹೊಂದಿದ್ದಾರೆ. ಈ ದಾಖಲೆಯ ಮೂಲಕ ಕೊಹ್ಲಿ, ಲೆಜೆಂಡರಿ ಬ್ಯಾಟರ್ ಮತ್ತು ಪ್ರಸ್ತುತ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮೀರಿಸಲು 207 ರನ್ ದೂರದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಲ್ಲಿ ಅದನ್ನು ಪೂರೈಸುವುದು ಅವರಿಗೆ ದೊಡ್ಡ ಕೆಲಸವಾಗಿದೆ. ಆದರೆ ಪ್ರಸ್ತುತ ಕೊಹ್ಲಿ ಇರುವ ಫಾರ್ಮ್ ನೋಡಿದರೆ, ಇದು ಕೊಹ್ಲಿಗೆ ಅಸಾಧ್ಯದ ಮಾತಲ್ಲ ಎಂಬುದಂತ್ತು ಖಚಿತ.
ಕೊಹ್ಲಿ ಭಾರತ ಪರ 102 ಟೆಸ್ಟ್‌ಗಳಲ್ಲಿ 8074 ರನ್, 262 ಏಕದಿನ ಪಂದ್ಯಗಳಲ್ಲಿ 12344 ರನ್ ಮತ್ತು 104 T20 ಪಂದ್ಯಗಳಲ್ಲಿ 3584 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ, ಅವರು 468 ಪಂದ್ಯಗಳನ್ನು ಆಡಿ, 522 ಇನ್ನಿಂಗ್ಸ್‌ಗಳಲ್ಲಿ 53.81 ಸರಾಸರಿಯಲ್ಲಿ 24,002 ರನ್ ಗಳಿಸಿದ್ದಾರೆ.
ಭಾರತದ ವಾಲ್, ದ್ರಾವಿಡ್ 605 ಇನ್ನಿಂಗ್ಸ್‌ಗಳಲ್ಲಿ 45.41 ಸರಾಸರಿಯಲ್ಲಿ 24,208 ರನ್ ಗಳಿಸಿದ್ದಾರೆ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 48 ಶತಕಗಳು ಮತ್ತು 146 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಕ್ರಿಕೆಟ್ ದೇವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 664 ಪಂದ್ಯಗಳನ್ನು ಆಡಿ 48.52 ಸರಾಸರಿಯಲ್ಲಿ 34,357 ರನ್ ಗಳಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ 100 ಶತಕ ಸಿಡಿಸಿದ ಏಕೈಕ ಬ್ಯಾಟರ್ ಕೂಡ ಆಗಿದ್ದಾರೆ.
ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಕೊಹ್ಲಿ ಟಿ 20 ಕ್ರಿಕೆಟ್ ಸೆಟ್‌ಅಪ್‌ನಲ್ಲಿ ಪ್ರಸ್ತುತ ತಂಡಕ್ಕೆ ಮೂರನೇ ಓಪನರ್ ಆಗಿದ್ದು, ಮುಂದಿನ ಕೆಲವು ಪಂದ್ಯಗಳಲ್ಲಿ ಅವರು ತಂಡದ ಪರ ಇನ್ನಿಂಗ್ಸ್ ಆರಂಭಿಸಬಹುದು ಎಂದಿದ್ದರು. ಹೀಗಾಗಿ ಭರ್ಜರಿ ಫಾರ್ಮ್ನಲ್ಲಿರುವ ಕೊಹ್ಲಿ ದ್ರಾವಿಡ್ ದಾಖಲೆಯನ್ನು ಈ ಸರಣಿಯಲ್ಲೇ ಮುರಿಯುತ್ತಾರೆ ಎಂಬುದು ಎಲ್ಲರ ಹಾರೈಕೆಯಾಗಿದೆ.