16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿ ರೋಚಕ ಘಟ್ಟದತ್ತ ಸಾಗುತ್ತಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ನೆಟ್ ರನ್ರೇಟ್ ಕೂಡ ಈಗ ಮಹತ್ವದ ಪಾತ್ರವಹಿಸುತ್ತಿದೆ. ಇದರ ನಡುವೆ ಇಂದು ಐಪಿಎಲ್ 2023 ರಲ್ಲಿ ನಿತೀಶ್ ರಾಣ (Nitish Rana) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಆ್ಯಡಂ ಮರ್ಕ್ರಮ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡ ಮುಖಾಮುಖಿ ಆಗುತ್ತಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯ ಆಗಿರುವ ಕಾರಣ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಕೆಕೆಆರ್ ಚೊಚ್ಚಲ ಪಂದ್ಯದಲ್ಲಿ ಸೋತಿದ್ದು ಬಿಟ್ಟರೆ ಉಳಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಅದರಲ್ಲೂ ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನೀಡಿದ ಪ್ರದರ್ಶನ ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ. ಕೊನೆಯ 6 ಎಸೆತಗಳಲ್ಲಿ ಕೆಕೆಆರ್ ಗೆಲುವಿಗೆ 28 ರನ್ ಬೇಕಾಗಿದ್ದಾಗ ರಿಂಕು ಸಿಂಗ್ ಸತತ 5 ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದಿಟ್ಟಿದ್ದರು. ಹೀಗಾಗಿ ಎಸ್ಆರ್ಹೆಚ್ಗೆ ರಿಂಕು ಭಯ ಇದ್ದೇ ಇದೆ. ಇದರ ಜೊತೆಗೆ ನಾಯಕ ನಿತೀಶ್ ರಾಣ ಫಾರ್ಮ್ಗೆ ಬಂದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ವೆಂಕಟೇಶ್ ಅಯ್ಯರ್ ಪ್ರತಿ ಪಂದ್ಯದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಆದರೆ, ಆಂಡ್ರೆ ರಸೆಲ್ ಬ್ಯಾಟ್ ಸದ್ದು ಮಾಡದಿರುವುದು ಹಿನ್ನಡೆ ಆಗಿದೆ.
ಹಾಗೆಯೆ ರೆಹ್ಮಾನುಲ್ಲ ಗುರ್ಬಜ್ ಹಾಗೂ ಎನ್. ಜಗದೀಸನ್ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ. ಶಾರ್ದೂಲ್ ಥಾಕೂರ್ ಆರ್ಸಿಬಿ ವಿರುದ್ಧ ಅಬ್ಬರಿಸಿದ್ದರು. ಅವರಿಂದಲೂ ಮತ್ತೊಮ್ಮೆ ಆಲ್ರೌಂಡ್ ಪ್ರದರ್ಶನ ನಿರೀಕ್ಷಿಸಲಾಗಿದೆ. ಸುನೀಲ್ ನರೈನ್ ಸ್ಪಿನ್ ಮ್ಯಾಜಿಕ್ ಚೆನ್ನಾಗಿ ಕೆಲಸ ಮಾಡುತ್ತಿದೆ. ಲೂಕಿ ಫರ್ಗುಸನ್ ಮತ್ತು ಉಮೇಶ್ ಯಾದವ್ ದುಬಾರಿ ಆಗುತ್ತಿದ್ದು ಲಯ ಕಂಡುಕೊಳ್ಳಬೇಕಿದೆ. ವರುಣ್ ಚಕ್ರವರ್ತಿ ಹಾಗೂ ಸುಯಶ್ ಶರ್ಮಾ ಕಠಿಣ ದಾಳಿ ನಡೆಸಿದರೆ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಬಹುದು.
RCB ತಂಡದ ಗ್ರೀನ್ ಗೇಮ್ ಯಾವಾಗ? ಯಾರ ವಿರುದ್ಧ? ಇಲ್ಲಿದೆ ಮಾಹಿತಿ
ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಜಯ ಸಾಧಿಸಿ ಎರಡರಲ್ಲಿ ಸೋಲುಂಡು ಪಾಯಿಂಟ್ ಟೇಬಲ್ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಆರಂಭದ ಎರಡು ಪಂದ್ಯಗಳಲ್ಲಿ ಸೋಲುಂಡು ಕಳೆದ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿತ್ತು. ಇದೇ ಫಾರ್ಮ್ ಇಂದುಕೂಡ ಮುಂದುವರೆಸುತ್ತಾ ನೋಡಬೇಕಿದೆ. ರಾಹುಲ್ ತ್ರಿಪಾಠಿ ಕಡೆಯಿಂದ ತಂಡಕ್ಕೆ ಉತ್ತಮ ಕೊಡುಗೆ ಸಲ್ಲುತ್ತಿದೆ. ನಾಯಕ ಆ್ಯಡಂ ಮರ್ಕ್ರಮ್ ಕೂಡ ಫಾರ್ಮ್ಗೆ ಬಂದಿದ್ದಾರೆ. ಮಯಾಂಕ್ ಅಗರ್ವಾಲ್ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಹ್ಯಾರಿ ಬ್ರೂಕ್ ಸ್ಥಾನದಲ್ಲಿ ಬದಲಾವಣೆ ಮಾಡಿದರೂ ಪ್ರದರ್ಶನ ಕಳಪೆ ಆಗಿದೆ.
ವಾಷಿಂಗ್ಟನ್ ಸುಂದರ್ ಕಡೆಯಿಂದ ಆಲ್ರೌಂಡ್ ಆಟ ಬರಬೇಕಿದೆ. ಹೆನ್ರಿಚ್ ಕ್ಲಾಸೆನ್ ಕೂಡ ಅಬ್ಬರಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ತಂಡದಲ್ಲಿ ಟಿ. ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್ರಂತಹ ಅಪಾಯಕಾರಿ ಬೌಲರ್ಗಳಿದ್ದರೂ ಮಾರಕವಾಗಿ ಗೋಚರಿಸುತ್ತಿಲ್ಲ. ತನ್ನ ಗೆಲುವಿನ ಲಯವನ್ನು ಮುಂದುವರೆಸಬೇಕಾದರೆ ಎಸ್ಆರ್ಹೆಚ್ ಬೌಲರ್ ಇಂದು ಹೊಸ ಪ್ಲಾನ್ನೊಂದಿಗೆ ಕಣಕ್ಕಿಳಿಯಬೇಕು. ತಂಡದಲ್ಲಿ ಬದಲಾವಣೆ ಆದರೂ ಅಚ್ಚರಿ ಪಡಬೇಕಿಲ್ಲ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ರೆಹ್ಮಾನುಲ್ಲ ಗುರ್ಬಜ್ (ವಿಕೆಟ್ ಕೀಪರ್), ಎನ್. ಜಗದೀಸನ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನೀಲ್ ನರೈನ್, ಶಾರ್ದೂಲ್ ಥಾಕೂರ್, ಉಮೇಶ್ ಯಾದವ್, ಸುಯಶ್ ಶರ್ಮಾ, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಮಂದೀಪ್ ಸಿಂಗ್, ಜೇಸನ್ ರಾಯ್, ಲಿಟ್ಟನ್ ದಾಸ್, ಡೇವಿಡ್ ವೈಸ್, ಅನುಕುಲ್ ರಾಯ್, ಕುಲ್ವಂತ್ ಖೆಜ್ರೋಲಿಯಾ, ವೈಭವ್ ಅರೋರಾ, ಹರ್ಷಿತ್ ರಾಣಾ.
ಸನ್‌ರೈಸರ್ಸ್ ಹೈದರಾಬಾದ್ ತಂಡ: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಆ್ಯಡಂ ಮರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್, ಆದಿಲ್ ರಶೀದ್, ಅಕೇಲ್ ಹೊಸೈನ್, ಗ್ಲೆನೆನ್ ಫಿಲಿಪ್ಸ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ವಿವ್ರಾಂತ್ ಶರ್ಮಾ.
ಸ್ಳಳ: ಈಡನ್ ಗಾರ್ಡನ್ಸ್ ಮೈದಾನ, ಕೋಲ್ಕತ್ತಾ
ಸಮಯ: ಸಂಜೆ 7:30ಕ್ಕೆ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ