ಸೂರತ್ನ ಲಾಲ್ಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket 2023) ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಮಣಿಪಾಲ್ ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅರ್ಬನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪಾಲ್ ಟೈಗರ್ಸ್ ತಂಡದ ನಾಯಕ ಹರ್ಭಜನ್ ಸಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ (0) ಹಾಗೂ ಡ್ವೇನ್ ಸ್ಮಿತ್ (21) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ರಿಕ್ಕಿ ಕ್ಲರ್ಕ್ ಅದ್ಭುತ ಇನಿಂಗ್ಸ್ ಆಡಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ರಿಕ್ಕಿ ಕ್ಲರ್ಕ್ 52 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 80 ರನ್ ಬಾರಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಗುರುಕೀರತ್ ಸಿಂಗ್ 36 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 64 ಸಿಡಿಸಿದರು. ಈ ಮೂಲಕ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು.
188 ರನ್ಗಳ ಕಠಿಣ ಗುರಿ ಪಡೆದ ಮಣಿಪಾಲ್ ಟೈಗರ್ಸ್ ತಂಡಕ್ಕೆ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (40) ಹಾಗೂ ಚಾಡ್ವಿಕ್ ವಾಲ್ಟನ್ (29) ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಬಂದ ಏಂಜೆಲೊ ಪೆರೇರಾ 30 ರನ್ಗಳ ಕೊಡುಗೆ ನೀಡಿದರು.
ಇನ್ನು ತಿಸಾರ ಪೆರೇರಾ 25 ರನ್ಗಳಿಸಿದರೆ, ಅಸೆಲಾ ಗುಣರತ್ನೆ 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ನೊಂದಿಗೆ ಅಜೇಯ 51 ರನ್ ಬಾರಿಸಿದರು. ಈ ಮೂಲಕ ಮಣಿಪಾಲ್ ಟೈಗರ್ಸ್ ತಂಡವು 19 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 193 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ.
🏆 PRESENTING THE CHAMPIONS OF #LLCT20 S2 🏆
CONGRATULATIONS @manipal_tigers! 🎉🥳#LegendsLeagueCricket #BossLogonKaGame pic.twitter.com/4yL16CJ5ns
— Legends League Cricket (@llct20) December 9, 2023
ಅರ್ಬನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಡ್ವೇನ್ ಸ್ಮಿತ್ , ರಿಕ್ಕಿ ಕ್ಲಾರ್ಕ್ , ಗುರುಕೀರತ್ ಸಿಂಗ್ ಮನ್ , ಸುರೇಶ್ ರೈನಾ (ನಾಯಕ) , ಪೀಟರ್ ಟ್ರೆಗೊ , ಸ್ಟುವರ್ಟ್ ಬಿನ್ನಿ , ಅಸ್ಗರ್ ಅಫ್ಘಾನ್ , ಅಮಿತ್ ಪೌನಿಕರ್ (ವಿಕೆಟ್ ಕೀಪರ್) , ಜೆರೋಮ್ ಟೇಲರ್ , ಕ್ರಿಸ್ ಎಂಪೋಫು.
ಇದನ್ನೂ ಓದಿ: WPL 2024ರ ಆಕ್ಷನ್ನಲ್ಲಿ ಹರಾಜಾದ ಹಾಗೂ ಹರಾಜಾಗದ ಆಟಗಾರ್ತಿಯರ ಪಟ್ಟಿ ಇಲ್ಲಿದೆ
ಮಣಿಪಾಲ್ ಟೈಗರ್ಸ್ ಪ್ಲೇಯಿಂಗ್ 11: ಚಾಡ್ವಿಕ್ ವಾಲ್ಟನ್ , ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಅಮಿತ್ ವರ್ಮಾ , ಏಂಜೆಲೊ ಪೆರೆರಾ , ಅಸೆಲಾ ಗುಣರತ್ನೆ , ತಿಸಾರಾ ಪೆರೆರಾ , ಪಂಕಜ್ ಸಿಂಗ್ , ಅಮಿಟೋಜ್ ಸಿಂಗ್ , ಹರ್ಭಜನ್ ಸಿಂಗ್ (ನಾಯಕ) , ಪ್ರವೀಣ್ ಗುಪ್ತಾ , ಮಿಚೆಲ್ ಮೆಕ್ಲೆನಾಘನ್.