ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ದೀರ್ಘಾವಧಿಯ ಬಳಿಕ ಡಕ್ ಔಟಾದ ಆರಂಭಿಕ ಆಟಗಾರ ಎಂಬ ಕಳಪೆ ದಾಖಲೆಯೊಂದು ನಮೀಬಿಯಾ ಬ್ಯಾಟರ್ ಲೋ-ಹಂಡ್ರೆ ಲೌರೆನ್ಸ್ ಪಾಲಾಗಿದೆ. ಅದು ಕೂಡ 23 ಎಸೆತಗಳನ್ನು ಎದುರಿಸಿ ಎಂಬುದು ವಿಶೇಷ. ಅಂದರೆ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದ ಆರಂಭಿಕ ಬ್ಯಾಟರ್ಗಳ ಪಟ್ಟಿಯಲ್ಲಿ ಈಗ ಲೋ-ಹಂಡ್ರೆ ಲೌರೆನ್ಸ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದಕ್ಕೂ ಮುನ್ನ ಬಾಂಗ್ಲಾದೇಶ್ ತಂಡದ ಮಾಜಿ ಆಟಗಾರ ಅತರ್ ಅಲಿ ಖಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.
1988 ರಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಅತರ್ ಅಲಿ ಖಾನ್ 22 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು.
ಇದೀಗ ಸ್ಕಾಟ್ಲೆಂಡ್ ವಿರುದ್ಧದ ಏಕದಿನ ವಿಶ್ವಕಪ್ ಲೀಗ್-2 ಪಂದ್ಯದಲ್ಲಿ ನಮೀಬಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಲೋ-ಹಂಡ್ರೆ ಲೌರೆನ್ಸ್ 23ನೇ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಡಕ್ ಔಟಾದ ಆರಂಭಿಕ ಆಟಗಾರ ಎಂಬ ಅನಗತ್ಯ ದಾಖಲೆ ಲೋ-ಹಂಡ್ರೆ ಲೌರೆನ್ಸ್ ಪಾಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಬಳಿಕ ಡಕ್ ಔಟ್ ಆದ ಬ್ಯಾಟರ್ ಎಂಬ ಹೀನಾಯ ದಾಖಲೆ ವೆಸ್ಟ್ ಇಂಡೀಸ್ನ ರುನಾಕೊ ಮಾರ್ಟನ್ ಹೆಸರಿನಲ್ಲಿದೆ. 2006 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರುನಾಕೊ 31 ಎಸೆತಗಳನ್ನು ಎದುರಿಸಿದರೂ ಯಾವುದೇ ರನ್ ಗಳಿಸದೇ ಔಟಾಗಿದ್ದರು. ಇದುವೇ ಸೀಮಿತ ಓವರ್ಗಳಲ್ಲಿ ಕಂಡು ಬಂದ ಅತ್ಯಂತ ದೀರ್ಘಾವಧಿಯ ಡಕ್ ಔಟ್.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?
ಇದೀಗ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅತ್ಯಂತ ದೀರ್ಘಾವಧಿ ಬಳಿಕ ಶೂನ್ಯಕ್ಕೆ ಔಟಾದ ಆರಂಭಿಕ ಬ್ಯಾಟರ್ ಎಂಬ ಕಳಪೆ ದಾಖಲೆ ಲೋ-ಹಂಡ್ರೆ ಲೌರೆನ್ಸ್ ಹೆಸರಿಗೆ ಸೇರ್ಪಡೆಯಾಗಿದೆ.