ನ್ಯೂಝಿಲೆಂಡ್ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ (Super Smash 2024) ಟಿ20 ಲೀಗ್ನ 22ನೇ ಪಂದ್ಯದಲ್ಲಿ ಲೋಗನ್ ವ್ಯಾನ್ ಬೀಕ್ ಒಂದೇ ಓವರ್ನಲ್ಲಿ ಬರೋಬ್ಬರಿ 33 ರನ್ ನೀಡಿದ್ದಾರೆ. ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಲ್ಲಿಂಗ್ಟನ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ನಿರೀಕ್ಷಿತ ಆರಂಭ ಪಡೆಯಲು ವೆಲ್ಲಿಂಗ್ಟನ್ ತಂಡಕ್ಕೆ ಸಾಧ್ಯವಾಗಿರಲಿಲ್ಲ.
ಕೇವಲ 72 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೆಲ್ಲಿಂಗ್ಟನ್ ತಂಡಕ್ಕೆ ಮುಹಮ್ಮದ್ ಅಬ್ಬಾಸ್ (35) ಆಸರೆಯಾದರು. ಹಾಗೆಯೇ ಕೊನೆಯ ಓವರ್ಗಳ ವೇಳೆ ಅಬ್ಬರಿಸಿದ ಲೋಗನ್ ವ್ಯಾನ್ ಬೀಕ್ 24 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ 41 ರನ್ ಬಾರಿಸಿದರು. ಈ ಮೂಲಕ ವೆಲ್ಲಿಂಗ್ಟನ್ ತಂಡವು 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.
148 ರನ್ಗಳ ಗುರಿ ಬೆನ್ನತ್ತಿದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡವು 16 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 115 ರನ್ ರನ್ಗಳಿಸಿತು. ಅಂತಿಮ 30 ಎಸೆತಗಳಲ್ಲಿ 33 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ವ್ಯಾನ್ ಬೀಕ್ ದುಬಾರಿಯಾದರು.
17ನೇ ಓವರ್ನ ಮೊದಲ ಎಸೆತದಲ್ಲೇ ವ್ಯಾನ್ ಬೀಕ್ ವೈಡ್ ಎಸೆದರು. ಚೆಂಡು ವಿಕೆಟ್ ಕೀಪರ್ ಅನ್ನು ವಂಚಿಸಿ ಬೌಂಡರಿ ಲೈನ್ ದಾಟಿತು. ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡಕ್ಕೆ ಅತಿರಿಕ್ತ 5 ರನ್ಗಳು ಲಭಿಸಿದವು. ಮರು ಎಸೆತದಲ್ಲಿ ಬ್ರೇಸ್ವೆಲ್ 1 ರನ್ ಕಲೆಹಾಕಿದರು. ಇನ್ನು 2ನೇ ಎಸೆತದಲ್ಲಿ ಟಾಮ್ ಬ್ರೂಸ್ 1 ರನ್ ಓಡಿದರು.
3ನೇ ಎಸೆತ ವೈಡ್. ನೋ ಬಾಲ್ ಆಗಿದ್ದ ಮರು ಎಸೆತದಲ್ಲಿ ಬ್ರೇಸ್ವೆಲ್ ಭರ್ಜರಿ ಸಿಕ್ಸ್ ಸಿಡಿಸಿದರು. ಫ್ರೀ ಹಿಟ್ ಎಸೆತದಲ್ಲಿ ಲಾಂಗ್ ಆಫ್ನತ್ತ ಸಿಕ್ಸರ್ ಬಾರಿಸಿದರು. 4ನೇ ಎಸೆತದಲ್ಲಿ ಬ್ರೇಸ್ವೆಲ್ ಬ್ಯಾಟ್ನಿಂದ ಡೀಪ್ ಮಿಡ್ ವಿಕೆಟ್ನತ್ತ ಮತ್ತೊಂದು ಸಿಕ್ಸ್. 5ನೇ ಎಸೆತದಲ್ಲಿ ಫೈನ್ ಲೆಗ್ನತ್ತ ಸಿಕ್ಸ್ ಬಾರಿಸುವ ಮೂಲಕ ಬ್ರೇಸ್ವೆಲ್ ತಂಡಕ್ಕೆ ಜಯ ತಂದುಕೊಟ್ಟರು.
ಇದರೊಂದಿಗೆ ಕೇವಲ 5 ಎಸೆತಗಳಲ್ಲಿ 33 ರನ್ ನೀಡಿದ ಕಳಪೆ ದಾಖಲೆಯೊಂದು ಲೋಗನ್ ವ್ಯಾನ್ ಬೀಕ್ ಹೆಸರಿಗೆ ಸೇರ್ಪಡೆಯಾಯಿತು. ಹಾಗೆಯೇ ಈ ಬಾರಿಯ ಸೂಪರ್ ಸ್ಮ್ಯಾಶ್ ಲೀಗ್ನ ಅತ್ಯಂತ ಕಳಪೆ ಬೌಲಿಂಗ್ ದಾಖಲೆ ಕೂಡ ಲೋಗನ್ ಪಾಲಾಯಿತು.
ವೆಲ್ಲಿಂಗ್ಟನ್ ಪ್ಲೇಯಿಂಗ್ 11: ನಿಕ್ ಗ್ರೀನ್‌ವುಡ್ , ಟ್ರಾಯ್ ಜಾನ್ಸನ್ , ನಿಕ್ ಕೆಲ್ಲಿ (ನಾಯಕ) , ಮುಹಮ್ಮದ್ ಅಬ್ಬಾಸ್ , ಜೆಸ್ಸಿ ತಾಷ್‌ಕಾಫ್ , ಕ್ಯಾಲಮ್ ಮೆಕ್‌ಲಾಚ್ಲಾನ್ (ವಿಕೆಟ್ ಕೀಪರ್) , ನಾಥನ್ ಸ್ಮಿತ್ , ಲೋಗನ್ ವ್ಯಾನ್ ಬೀಕ್ , ಪೀಟರ್ ಯಂಗ್‌ಹಸ್‌ಬಂಡ್ , ಇಯಾನ್ ಮ್ಯಾಕ್‌ಪೀಕ್ , ಮೈಕೆಲ್ ಸ್ನೆಡೆನ್.
ಇದನ್ನೂ ಓದಿ: ಈ IPL ನಲ್ಲೂ RCBಗೆ ಸೋಲು: SRH ವಿನ್ನರ್..!
ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪ್ಲೇಯಿಂಗ್ 11: ವಿಲ್ ಯಂಗ್ , ಜ್ಯಾಕ್ ಬೋಯ್ಲ್ , ಡೇನ್ ಕ್ಲೀವರ್ (ವಿಕೆಟ್ ಕೀಪರ್) , ಟಾಮ್ ಬ್ರೂಸ್ (ನಾಯಕ) , ಡೌಗ್ ಬ್ರೇಸ್ವೆಲ್ , ವಿಲಿಯಂ ಕ್ಲಾರ್ಕ್ , ಬೆವನ್ ಸ್ಮಾಲ್ , ಜೋಯ್ ಫೀಲ್ಡ್ , ಅಜಾಜ್ ಪಟೇಲ್ , ಬ್ಲೇರ್ ಟಿಕ್ನರ್ , ಜೇಡನ್ ಲೆನಾಕ್ಸ್.