LPL 2024: 6,6,6,6,6,6: ದಾಖಲೆಯ ಶತಕ ಸಿಡಿಸಿದ ಟಿಮ್ ಸೀಫರ್ಟ್
LPL 2024: ಲಂಕಾ ಪ್ರೀಮಿಯರ್ ಲೀಗ್ನ 6ನೇ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಟಿಮ್ ಸೀಫರ್ಟ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಸಿಕ್ಸ್-ಫೋರ್ಗಳ ಅಬ್ಬರದೊಂದಿಗೆ ಎಂಬುದು ವಿಶೇಷ. ಈ ಪಂದ್ಯದಲ್ಲಿ 63 ಎಸೆತಗಳನ್ನು ಎದುರಿಸಿದ ಸೀಫರ್ಟ್ ಅಜೇಯ 104 ರನ್ ಸಿಡಿಸಿದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ನಲ್ಲಿ (LPL 2024) ನ್ಯೂಝಿಲೆಂಡ್ ಕ್ರಿಕೆಟಿಗ ಟಿಮ್ ಸೀಫರ್ಟ್ (Tim Seifert) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗಾಲೆ ಮಾರ್ವೆಲ್ಸ್ ಮತ್ತು ಜಾಫ್ನಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಾಫ್ನಾ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಗಾಲೆ ಮಾರ್ವೆಲ್ಸ್ ತಂಡವು 45 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಟಿಮ್ ಸೀಫರ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಸೀಫರ್ಟ್ ಆ ಬಳಿಕ ಅಬ್ಬರಿಸಲಾರಂಭಿಸಿದರು.
ಪರಿಣಾಮ ಟಿಮ್ ಸೀಫರ್ಟ್ ಬ್ಯಾಟ್ನಿಂದ 6 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳು ಮೂಡಿಬಂದವು. ಈ ಮೂಲಕ 63 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸಿ ಮಿಂಚಿದರು. ಈ ಶತಕದ ನೆರವಿನಿಂದ ಗಾಲೆ ಮಾರ್ವೆಲ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು.
188 ರನ್ಗಳ ಗುರಿಯನ್ನು ಬೆನ್ನತ್ತಿದ ಜಾಫ್ನಾ ಕಿಂಗ್ಸ್ ತಂಡಕ್ಕೆ ಕುಸಾಲ್ ಮೆಂಡಿಸ್ ಸ್ಪೋಟಕ ಆರಂಭ ಒದಗಿಸಿದರು. ಮೆಂಡಿಸ್ ಕೇವಲ 16 ಎಸೆತಗಳಲ್ಲಿ 30 ರನ್ ಬಾರಿಸಿದರೆ, ಆ ಬಳಿಕ ಬಂದ ರಿಲೀ ರೊಸೊವ್ 42 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 67 ರನ್ ಚಚ್ಚಿದರು.
ಪರಿಣಾಮ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಈ ಹಂತದಲ್ಲಿ ಕಣಕ್ಕಿಳಿದ ಅಝ್ಮತುಲ್ಲಾ ಒಮರ್ಝಾಹಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕೇವಲ 13 ಎಸೆತಗಳನ್ನು ಎದುರಿಸಿದ ಅಝ್ಮತುಲ್ಲಾ 2 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 35 ರನ್ ಚಚ್ಚಿದರು. ಈ ಮೂಲಕ 19.4 ಓವರ್ಗಳಲ್ಲಿ ಜಾಫ್ನಾ ಕಿಂಗ್ಸ್ ತಂಡ ಗುರಿ ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು.
ದಾಖಲೆ ಬರೆದ ಸೀಫರ್ಟ್:
ಈ ಪಂದ್ಯದಲ್ಲಿ ಶತಕ ಸಿಡಿಸುವುದರೊಂದಿಗೆ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಸೆಂಚುರಿ ಬಾರಿಸಿದ ಆರಂಭಿಕನಲ್ಲದ ಮೊದಲ ಬ್ಯಾಟರ್ ಎಂಬ ದಾಖಲೆ ಸೀಫರ್ಟ್ ಪಾಲಾಯಿತು.
ಹಾಗೆಯೇ ಲಂಕಾ ಪ್ರೀಮಿಯರ್ ಲೀಗ್ನ ಇನಿಂಗ್ಸ್ವೊಂದರಲ್ಲಿ ಬೌಂಡರಿಗಳ ಮೂಲಕ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಕೂಡ ಸೀಫರ್ಟ್ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಸೀಫರ್ಟ್ ಸಿಕ್ಸ್-ಫೋರ್ಗಳ ಮೂಲಕವೇ 84 ರನ್ ಕಲೆಹಾಕಿದ್ದರು.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು?
ಇದಕ್ಕೂ ಮುನ್ನ ಕುಸಾಲ್ ಜಾನಿತ್ ಸಿಕ್ಸ್-ಫೋರ್ಗಳ ಮೂಲಕ 70 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 6 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 84 ರನ್ ಕಲೆಹಾಕುವ ಮೂಲಕ ಟಿಮ್ ಸೀಫರ್ಟ್ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.