ಇಂಡಿಯನ್ ಪ್ರೀಮಿಯರ್ ಲೀಗ್‌ನ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದೆ. ಈಗಾಗಲೇ ಏಳು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ಇದುವರೆಗೆ ಗೆಲುವಿನ ಖಾತೆ ತೆರೆದಿಲ್ಲ. ಹೀಗಾಗಿ ಲಕ್ನೋ ವಿರುದ್ದ ಮೊದಲ ಜಯದ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಬಲಿಷ್ಠ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಹೀಗಾಗಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಲಕ್ನೋ ಸೂಪರ್ ಜೈಂಟ್ಸ್ ತಂಡವು ಏಳು ಪಂದ್ಯಗಳಿಂದ ನಾಲ್ಕು ಗೆಲುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದಾಗ್ಯೂ, ಲಕ್ನೋ ತನ್ನ ಕೊನೆಯ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ತಂಡವನ್ನು ಸೋಲಿಸಿತು. ಹೀಗಾಗಿ ಮುಂಬೈ ವಿರುದ್ಧ ಲಕ್ನೋ ಗೆಲುವಿನ ಹಾದಿಗೆ ಮರಳುವ ನಿರೀಕ್ಷೆಯಲ್ಲಿದೆ.
ಮುಂಬೈ ತಂಡದಲ್ಲಿ ಬದಲಾವಣೆ!
ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ರೋಹಿತ್ ಶರ್ಮಾ ಫಾರ್ಮ್ ತಂಡಕ್ಕೆ ಆತಂಕ ತಂದಿದೆ. ಜಸ್ಪ್ರೀತ್ ಬುಮ್ರಾ ಮತ್ತು ಕೀರನ್ ಪೊಲಾರ್ಡ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಜಯದೇವ್ ಉನದ್ಕತ್ ಕೊನೆಯ ಓವರ್ 17 ರನ್ ನೀಡಿದ್ದರು. ಹೀಗಾಗಿ ಅವರ ಸ್ಥಾನದಲ್ಲಿ ಮತ್ತೊಮ್ಮೆ ಬಾಸಿಲ್ ಥಂಪಿಗೆ ಅವಕಾಶ ಸಿಗಬಹುದು. ಹಾಗೆಯೇ ಕಳೆದ ಪಂದ್ಯದಲ್ಲಿ ಆಡಿದ್ದ ಹೃತಿಕ್ ಶೌಕಿನ್ ಈ ಬಾರಿ ಕೂಡ ತಂಡದಲ್ಲಿ ಕಾಣಿಸಿಕೊಳ್ಳಬಹುದು.
ಮತ್ತೊಂದೆಡೆ ಲಕ್ನೋ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಮನೀಷ್ ಪಾಂಡೆ ಅವರನ್ನು ಬಿಟ್ಟರೆ ಬೇರೆಯವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕಂಡು ಬಂದಿದೆ. ಹೀಗಾಗಿ ಪಾಂಡೆ ಬದಲಿಗೆ ಆಲ್ರೌಂಡರ್ ಕೃಷ್ಣಪ್ಪ ಗೌತಮ್ಗೆ ಸ್ಥಾನ ನೀಡಬಹುದು. ಇದರ ಹೊರತಾಗಿ ತಂಡದಲ್ಲಿ ಬೇರೆ ಬದಲಾವಣೆ ಕಂಡು ಬರುವ ಸಾಧ್ಯತೆ ತುಂಬಾ ಕಡಿಮೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್-11 ಹೀಗಿದೆ:
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಕೃಷ್ಣಪ್ಪ ಗೌತಮ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಸ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಹೃತಿಕ್ ಶೋಕಿನ್, ಬಾಸಿಲ್ ಥಂಪಿ, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ