ಕಾಲ್ತುಳಿತ ದುರಂತ: ಮಹಾರಾಜ ಟಿ20 ಲೀಗ್ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್
Maharaja T20 League: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಅವಘಡದಿಂದಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮಹಾರಾಜ ಟಿ20 ಲೀಗ್ ಅನ್ನು ಮೈಸೂರಿನ ಒಡೆಯರ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ. ಆಗಸ್ಟ್ 11 ರಿಂದ 28 ರವರೆಗೆ ನಡೆಯುವ ಈ ಲೀಗ್ ಅಭಿಮಾನಿಗಳಿಲ್ಲದೆ ನಡೆಯಲಿದೆ. ಬೆಂಗಳೂರಿನಲ್ಲಿ ಅನುಮತಿ ನಿರಾಕರಣೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬದಲಾವಣೆಯು ಫ್ರಾಂಚೈಸಿಗಳಿಗೆ ಸವಾಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಮಹಾರಾಜ ಟಿ20 ಲೀಗ್ (Maharaja T20 League) ಬಗ್ಗೆ ಅತಿ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ಆ ಪ್ರಕಾರ, ಈ ಬಾರಿಯ ಮಹಾರಾಜ ಟಿ20 ಲೀಗ್ ಪಂದ್ಯಾವಳಿಯನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬದಲಿಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಪೊಲೀಸರಿಂದ ಪಂದ್ಯಾವಳಿಗೆ ಅನುಮತಿ ಸಿಗದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಆಗಸ್ಟ್ 11 ರಿಂದ 28 ರವರೆಗೆ ನಡೆಯಲ್ಲಿರುವ ಈ ಟೂರ್ನಿಯನ್ನು ಅಭಿಮಾನಿಗಳಿಲ್ಲದೆ ನಡೆಸಲು ತೀರ್ಮಾನಿಸಲಾಗಿದೆ. ಅಂದರೆ ಮಹಾರಾಜ ಟಿ20 ಲೀಗ್ ಪಂದ್ಯಾವಳಿಯನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶವಿರುವುದಿಲ್ಲ.
ಕಾಲ್ತುಳಿದ ದುರಂತ
ವಾಸ್ತವವಾಗಿ, ಈ ವರ್ಷದ ಜೂನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಮಾರಂಭ ನಡೆಯುವುದಕ್ಕೂ ಮುನ್ನ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದಾಗಿ 11 ಜನರು ಸಾವನ್ನಪ್ಪಿದರು. ಹಾಗೆಯೇ 50 ಕ್ಕೂ ಹೆಚ್ಚು ಜನರು ಗಾಯಗೊಂಡರು.
ಈ ಅವಘಡದ ನಂತರ, ರಾಜ್ಯ ಸರ್ಕಾರ ರಚಿಸಿದ ತನಿಖಾ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಕಾರ್ಯಕ್ರಮಗಳಿಗೆ ಅಸುರಕ್ಷಿತ’ ಎಂದು ಘೋಷಿಸಿತು. ಅಲ್ಲದೆ ದೊಡ್ಡ ಕಾರ್ಯಕ್ರಮಗಳನ್ನು ಹೆಚ್ಚು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಸೂಚಿಸಿತು. ಅಲ್ಲದೆ ಈ ಘಟನೆಯ ನಂತರ, ಇಬ್ಬರು KSCA ಅಧಿಕಾರಿಗಳು ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರು.
ಮಹಾರಾಜ ಟಿ20 ಲೀಗ್ ಮೈಸೂರಿಗೆ ಶಿಫ್ಟ್
ಈ ಘಟನೆಯಿಂದಾಗಿ, ಕೆಎಸ್‌ಸಿಎ ಈ ಹಿಂದೆ ಅಭಿಮಾನಿಗಳಿಲ್ಲದೆ ಮಹಾರಾಜ ಟಿ20 ಲೀಗ್ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ ಈಗ ಇಡೀ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಈ ಬದಲಾವಣೆಯು ಫ್ರಾಂಚೈಸಿ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ವಾಸ್ತವವಾಗಿ, ಮೈಸೂರು ವಾರಿಯರ್ಸ್ ಹೊರತುಪಡಿಸಿ ಹೆಚ್ಚಿನ ತಂಡಗಳು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಅಭ್ಯಾಸ ಮಾಡುತ್ತಿದ್ದವು. ಇದೀಗ ಎಲ್ಲಾ ಫ್ರಾಂಚೈಸಿಗಳು ಮೈಸೂರಿಗೆ ಪ್ರಯಾಣ ಬೆಳೆಸಬೇಕಾಗಿದೆ. ಮತ್ತೊಂದೆಡೆ, ಮೈಸೂರಿನ ಒಡೆಯರ್ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಾಗಿ ಸಿದ್ಧತೆಗಳನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ.
Bengaluru stampede: ಚಿನ್ನಸ್ವಾಮಿ ಕಾಲ್ತುಳಿತ ದುರಂತ; ಮಹತ್ವದ ನಿರ್ಧಾರ ತೆಗೆದುಕೊಂಡ ಬಿಸಿಸಿಐ
6 ತಂಡಗಳ ನಡುವೆ ನಡೆಯಲಿದೆ ಪಂದ್ಯಾವಳಿ
ಮಹಾರಾಜ ಟಿ20 ಲೀಗ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಇವುಗಳಲ್ಲಿ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್ ಮತ್ತು ಮಂಗಳೂರು ಡ್ರಾಗನ್ಸ್ ಸೇರಿವೆ. ಅದೇ ಸಮಯದಲ್ಲಿ, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್ ಮತ್ತು ಮನೀಶ್ ಪಾಂಡೆ ಅವರಂತಹ ಸ್ಟಾರ್ ಆಟಗಾರರು ಸಹ ಈ ಲೀಗ್‌ನಲ್ಲಿ ಆಡಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
