Maharaja Trophy: ಬೆಂಗಳೂರು ವಿರುದ್ಧ ಗೆದ್ದ ಮಂಗಳೂರು; ಫೈನಲ್ ಎದುರಾಳಿ ಹುಬ್ಬಳ್ಳಿ
Maharaja T20 Trophy 2025: ಮಹಾರಾಜ ಟಿ20 ಟ್ರೋಫಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಮತ್ತು ಮಂಗಳೂರು ಡ್ಯ್ರಾಗನ್ಸ್ ತಂಡಗಳು ಮುಖಾಮುಖಿಯಾಗಲಿವೆ.ಇಂದು ನಡೆದ ಕ್ವಾಲಿಫೈಯರ್ 2 ರಲ್ಲಿ ಮಂಗಳೂರು ಡ್ರ್ಯಾಗನ್ಸ್, ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಆಗಸ್ಟ್ 28ರಂದು ಹುಬ್ಬಳ್ಳಿ ಹಾಗೂ ಮಂಗಳೂರು ನಡುವೆ ಫೈನಲ್ ಪಂದ್ಯ ನಡೆಯಲಿದೆ.

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯಲ್ಲಿ (Maharaja T20 Trophy) ಪ್ರಶಸ್ತಿಗಾಗಿ ಸೆಣಸಾಡುವ ಎರಡು ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಆಗಸ್ಟ್ 26 ರಂದು ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಮಣಿಸಿದ ಹುಬ್ಬಳ್ಳಿ ಟೈಗರ್ಸ್ (Hubli Tigers) ತಂಡ ಫೈನಲ್ಗೇರಿತ್ತು. ಆ ಬಳಿಕ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡ ಗುಲ್ಬರ್ಗಾ ತಂಡವನ್ನು ಮಣಿಸಿತ್ತು. ಇಂದು ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿದ ಮಂಗಳೂರು ಡ್ರ್ಯಾಗನ್ಸ್ (Mangaluru Dragons) ತಂಡ ಫೈನಲ್ನಲ್ಲಿ ಹುಬ್ಬಳ್ಳಿ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಫೈನಲ್ ಕಾಳಗ ಆಗಸ್ಟ್ 28 ರಂದು ಅಂದರೆ ನಾಳೆ ನಡೆಯಲಿದೆ.
152 ರನ್ ಕಲೆಹಾಕಿದ ಬೆಂಗಳೂರು
ಪ್ಲೇ ಅಫ್ ಸುತ್ತಿನಲ್ಲಿ ಸೋತಿದ್ದ ಮಂಗಳೂರು ಡ್ರ್ಯಾಗನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 19.4 ಓವರ್‌ಗಳಲ್ಲಿ ಆಲೌಟ್ ಆಗಿ ಕೇವಲ 152 ರನ್ ಕಲೆಹಾಕಿತು. ತಂಡದ ಪರ ರೋಹನ್ ಪಾಟೀಲ್ ಬಿಟ್ಟರೆ ಮತ್ತ್ಯಾವ ಆಟಗಾರನಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ.
ರೋಹನ್ ಪಾಟೀಲ್ ಏಕಾಂಗಿ ಹೋರಾಟ
ರೋಹನ್ ಪಾಟೀಲ್ ಒಬ್ಬರೇ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 86 ರನ್ ಕಲೆಹಾಕಿದರು. ಆದರೆ ಇವರಿಗೆ ಉಳಿದ ಬ್ಯಾಟ್ಸ್ಮನ್ಗಳಿಂದ ಸಾಥ್ ಸಿಗಲಿಲ್ಲ. ಸೂರಜ್ ಅಹುಜಾ (16) ಮತ್ತು ಜ್ಞಾನೇಶ್ವರ ನವೀನ್ (10) ಮಾತ್ರ ಎರಡಂಕಿ ದಾಟಿದರು. ಉಳಿದ ಯಾವ ಬ್ಯಾಟ್ಸ್ಮನ್ಗೂ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ. ಒಂದು ವೇಳೆ ರೋಹನ್ ಕೂಡ ಕಡಿಮೆ ಮೊತ್ತಕ್ಕೆ ಔಟಾಗಿದ್ದರೆ, ತಂಡ 50 ರನ್ಗಳ ಗಡಿ ಕೂಡ ದಾಟುತ್ತಿರಲಿಲ್ಲ. ಮಂಗಳೂರು ಪರ ಮಾರಕ ಬೌಲಿಂಗ್ ಮಾಡಿದ ನಾಯಕ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರೆ, ಅಭಿಲಾಷ್ 2 ವಿಕೆಟ್ ಉರುಳಿಸಿದರು.
ಮಂಗಳೂರು ತಂಡಕ್ಕೆ 7 ವಿಕೆಟ್ ಜಯ
ಈ ಗುರಿ ಬೆನ್ನಟ್ಟಿದ ಮಂಗಳೂರು ತಂಡಕ್ಕೆ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಸಿಕ್ಕಿತು. ಆರಂಭಿಕರಾದ ಲೋಚನ್ ಹಾಗೂ ಶರತ್ 63 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ಶರತ್ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಪಲ್ಲವಕುಮಾರ್ ದಾಸ್ ಅವರ ಇನ್ನಿಂಗ್ಸ್ ಕೂಡ 23 ರನ್ಗಳಿಗೆ ಅಂತ್ಯವಾಯಿತು. ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಕೂಡ 24 ರನ್ ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ವಿಕೆಟ್ ಒಪ್ಪಿಸಿದರು. ಆದರೆ ಆರಂಭದಿಂದಲೂ ತಾಳ್ಮೆಯ ಆಟವನ್ನಾಡಿದ ಲೋಚನ್ 51 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 62 ರನ್ ಬಾರಿಸಿ ತಂಡವನ್ನು ಫೈನಲ್ಗೆ ಕೊಂಡೊಯ್ದರು.
Published On - 11:14 pm, Wed, 27 August 25
