ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. 18 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಮೈಸೂರು ವಾರಿಯರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮೈಸೂರು ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.
ಎಸ್ ಕಾರ್ತಿಕ್ 12 ರನ್ಗಳಿಸಿ ಔಟಾದರೆ, ಅಜಿತ್ ಕಾರ್ತಿಕ್ 27 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಇನ್ನು ನಾಯಕ ಕರುಣ್ ನಾಯರ್ 14 ರನ್ಗಳಿಸಲಷ್ಟೇ ಶಕ್ತರಾದರು. ಆ ಬಳಿಕ ಬಂದ ಸಮಿತ್ ದ್ರಾವಿಡ್ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಹರ್ಷಿಲ್ ಧರ್ಮನಿ 32 ಎಸೆತಗಳಲ್ಲಿ 50 ರನ್ ಬಾರಿಸಿದರೆ, ಮನೋಜ್ ಭಾಂಡಗೆ 33 ಎಸೆತಗಳಲ್ಲಿ 5 ಫೋರ್ ಹಾಗೂ 3 ಸಿಕ್ಸ್ನೊಂದಿಗೆ 58 ರನ್ ಚಚ್ಚಿದರು. ಈ ಅರ್ಧಶತಕಗಳ ನೆರವಿನಿಂದ ಮೈಸೂರು ವಾರಿಯರ್ಸ್ ತಂಡವು 18 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.
18 ಓವರ್ಗಳಲ್ಲಿ 183 ರನ್ಗಳ ಕಠಿಣ ಗುರಿ ಪಡೆದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ ಕೇವಲ 1 ರನ್ಗಳಿಸಿ ಕಾರ್ತಿಕ್ ಸಿಎಗೆ ವಿಕೆಟ್ ಒಪ್ಪಿಸಿದ್ದರು. ಮತ್ತೊಂದೆಡೆ ಎಲ್ಆರ್ ಚೇತನ್ 25 ಎಸೆತಗಳಲ್ಲಿ 33 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಭುವನ್ ರಾಜು ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಭುವನ್ ಮೈಸೂರು ವಾರಿಯರ್ಸ್ ಬೌಲರ್ಗಳ ಬೆಂಡೆತ್ತಿದರು.
ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದ ಭುವನ್ ರಾಜು 24 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 51 ರನ್ ಚಚ್ಚಿದರು. ಈ ಹಂತದಲ್ಲಿ ರನ್ ಕದಿಯುವ ಯತ್ನದಲ್ಲಿ ರನೌಟ್ ಆದರು. ಇನ್ನು ಆ ಬಳಿಕ ಬಂದ ಶುಭಾಂಗ್ ಹೆಗ್ಡೆ ಅಜೇಯ 27 ರನ್ ಬಾರಿಸಿದರೆ, ಸೂರಜ್ ಅಹುಜಾ 39 ರನ್ಗಳ ಕೊಡುಗೆ ನೀಡಿದರು.
ಈ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ತಂಡವು 17.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಬೆಂಗಳೂರು ಬ್ಲಾಸ್ಟರ್ಸ್ ಪ್ಲೇಯಿಂಗ್ 11: ಎಲ್ಆರ್ ಚೇತನ್ , ಮಯಾಂಕ್ ಅಗರ್ವಾಲ್ (ನಾಯಕ) , ಭುವನ್ ರಾಜು , ಸೂರಜ್ ಅಹುಜಾ (ವಿಕೆಟ್ ಕೀಪರ್) , ಅನಿರುದ್ಧ್ ಜೋಶಿ , ಶುಭಾಂಗ್ ಹೆಗ್ಡೆ , ಕ್ರಾಂತಿ ಕುಮಾರ್ , ಆದಿತ್ಯ ಗೋಯಲ್ , ನವೀನ್, ಮೊಹ್ಸಿನ್ ಖಾನ್ , ಲವಿಶ್ ಕೌಶಲ್.
ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ಕೋದಂಡ ಅಜಿತ್ ಕಾರ್ತಿಕ್ , ಎಸ್ ಕಾರ್ತಿಕ್ , ಕರುಣ್ ನಾಯರ್ (ನಾಯಕ) , ಸಮಿತ್ ದ್ರಾವಿಡ್ , ಹರ್ಷಿಲ್ ಧರ್ಮನಿ , ಸುಮಿತ್ ಕುಮಾರ್ ( ವಿಕೆಟ್ ಕೀಪರ್) , ಜಗದೀಶ ಸುಚಿತ್ , ಕೃಷ್ಣಪ್ಪ ಗೌತಮ್ , ಮನೋಜ್ ಭಾಂಡಗೆ , ವಿದ್ಯಾಧರ್ ಪಾಟೀಲ್ , ಗೌತಮ್ ಮಿಶ್ರಾ.