Maharaja Trophy 2024: ಅಜೇಯ ಶತಕ ಸಿಡಿಸಿ ಗುಲ್ಬರ್ಗಕ್ಕೆ ಚೊಚ್ಚಲ ಗೆಲುವು ತಂದ ಸ್ಮರಣ್

|

Updated on: Aug 18, 2024 | 8:01 PM

Maharaja Trophy 2024: ಬೆಂಗಳೂರಿನಲ್ಲಿ ನಡೆದ ಮಹಾರಾಜ ಟ್ರೋಫಿ 7 ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡವನ್ನು ಗುಲ್ಬರ್ಗ ಮಿಸ್ಟಿಕ್ಸ್ ತಂಡ 3 ವಿಕೆಟ್​ಗಳಿಂದ ಮಣಿಸಿತು. ಇದರೊಂದಿಗೆ ಈ ಲೀಗ್​ನಲ್ಲಿ ಗುಲ್ಬರ್ಗ ತಂಡ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ಈ ಪಂದ್ಯಕ್ಕೂ ಮುನ್ನ ಎರಡು ಪಂದ್ಯಗಳನ್ನಾಡಿದ್ದ ಗುಲ್ಬರ್ಗ ತಂಡ ಆಡಿದ ಎರಡು ಪಂದ್ಯಗಳಲ್ಲೂ ಸೋತಿತ್ತು.

Maharaja Trophy 2024: ಅಜೇಯ ಶತಕ ಸಿಡಿಸಿ ಗುಲ್ಬರ್ಗಕ್ಕೆ ಚೊಚ್ಚಲ ಗೆಲುವು ತಂದ ಸ್ಮರಣ್
ಸ್ಮರಣ್ ರವಿಚಂದ್ರನ್
Follow us on

ಬೆಂಗಳೂರಿನಲ್ಲಿ ನಡೆದ ಮಹಾರಾಜ ಟ್ರೋಫಿ 7 ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡವನ್ನು ಗುಲ್ಬರ್ಗ ಮಿಸ್ಟಿಕ್ಸ್ ತಂಡ 3 ವಿಕೆಟ್​ಗಳಿಂದ ಮಣಿಸಿತು. ಇದರೊಂದಿಗೆ ಈ ಲೀಗ್​ನಲ್ಲಿ ಗುಲ್ಬರ್ಗ ತಂಡ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ಈ ಪಂದ್ಯಕ್ಕೂ ಮುನ್ನ ಎರಡು ಪಂದ್ಯಗಳನ್ನಾಡಿದ್ದ ಗುಲ್ಬರ್ಗ ತಂಡ ಆಡಿದ ಎರಡು ಪಂದ್ಯಗಳಲ್ಲೂ ಸೋತಿತ್ತು. ಒಂದು ಹಂತದಲ್ಲಿ ಈ ಪಂದ್ಯವೂ ಗುಲ್ಬರ್ಗ ಕೈಯಿಂದ ಜಾರಿತ್ತು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಸ್ಮರಣ್ ರವಿಚಂದ್ರನ್ ಅಜೇಯ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇತ್ತ 196 ರನ್​ಗಳ ಬೃಹತ್ ಮೊತ್ತ ಕಲೆಹಾಕಿಯೂ ಮೈಸೂರು ವಾರಿಯರ್ಸ್​ ತಂಡ ಸತತ ಎರಡನೇ ಸೋಲು ಅನುಭವಿಸಬೇಕಾಯಿತು.

ಕರುಣ್ ಸ್ಫೋಟಕ ಅರ್ಧಶತಕ

ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 198 ರನ್ ಕಲೆಹಾಕಿತು. ತಂಡದ ಪರ ನಾಯಕ ಕರುಣ್ ನಾಯರ್ ಸ್ಫೋಟಕ ಅರ್ಧಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 35 ಎಸೆತಗಳನ್ನು ಎದುರಿಸಿದ ಕರುಣ್ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 66 ರನ್ ಕಲೆಹಾಕಿದರು.

ಕರುಣ್​ಗೆ ಸಾಥ್ ನೀಡಿದ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ ದ್ರಾವಿಡ್ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 33 ರನ್ ಬಾರಿಸಿದರು. ಇದರೊಂದಿಗೆ ಸಮಿತ್ ತಮ್ಮ ಕಳಪೆ ಫಾರ್ಮ್​ನಿಂದ ಹೊರಬರುವ ಕೆಲಸ ಮಾಡಿದರು. ವಾಸ್ತವವಾಗಿ ಸಮಿತ್ ಆಡಿದ ಮೊದಲೆರಡು ಪಂದ್ಯಗಳಲ್ಲಿ ಕೇವಲ ಒಂದಂಕಿಗೆ ಸುಸ್ತಾಗಿದ್ದರು. ಇನ್ನು ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಜಗದೀಶ್ ಸುಚಿತ್ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 40 ರನ್​ಗಳ ಕಾಣಿಕೆ ನೀಡಿದರು. ಈ ಮೂವರ ಆಟದಿಂದ ಮೈಸೂರು ತಂಡ 196 ರನ್ ಕಲೆಹಾಕಿತು.

ಗುಲ್ಬರ್ಗ ತಂಡಕ್ಕೆ ಕಳಪೆ ಆರಂಭ

ಈ ಗುರಿ ಬೆನ್ನಟ್ಟಿದ ಗುಲ್ಬರ್ಗ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಲುವ್ನಿತ್ ಸಿಸೋಡಿಯಾ 4 ರನ್​ಗಳಿಗೆ ಸುಸ್ತಾದರೆ, ನಾಯಕ ದೇವದತ್ ಪಡಿಕ್ಕಲ್ 1 ರನ್​ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಅನೀಶ್ ಇನ್ನಿಂಗ್ಸ್​ 24 ರನ್​ಗಳಿಗೆ ಕೊನೆಗೊಂಡಿತು. ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಸ್ಮರಣ್ ರವಿಚಂದ್ರನ್ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸ್ಮರಣ್ ಸ್ಮರಣೀಯ ಇನ್ನಿಂಗ್ಸ್

ಸ್ಮರಣ್ ತಮ್ಮ ಇನ್ನಿಂಗ್ಸ್​ನಲ್ಲಿ 60 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 104 ರನ್ ಬಾರಿಸಿದರು. ಒಂದು ವೇಳೆ ಸ್ಮರಣ್ ಅಜೇಯ ಶತಕ ಸಿಡಿಸದಿದ್ದರೆ, ಗುಲ್ಬರ್ಗ ತಂಡಕ್ಕೆ ಈ ಪಂದ್ಯದಲ್ಲೂ ಸೋಲು ಖಚಿತವಾಗಿತ್ತು. ಆದರೆ ಕೆಳಕ್ರಮಾಂಕದಲ್ಲಿ ಪ್ರವೀಣ್ ದುಬೆ ಅವರಿಂದ 37 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಜೊತೆಗೆ ಉತ್ತಮ ಸಾಥ್ ಪಡೆದ ಸ್ಮರಣ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Sun, 18 August 24