Maharaja Trophy 2023: ಫೈನಲ್​ಗೆ ಲಗ್ಗೆಯಿಟ್ಟ ಹುಬ್ಬಳ್ಳಿ ಟೈಗರ್ಸ್​

| Updated By: ಝಾಹಿರ್ ಯೂಸುಫ್

Updated on: Aug 28, 2023 | 4:55 PM

Maharaja Trophy T20 2023: 150 ರನ್​ಗಳ ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಲವ್ನೀತ್ ಸಿಸೋಡಿಯಾ 13 ರನ್​ಗಳಿಸಿ 2ನೇ ಓವರ್​ನಲ್ಲೇ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸ್ಪೋಟಕ ದಾಂಡಿಗ ಮೊಹಮ್ಮದ್ ತಾಹ ಅಬ್ಬರಿಸಲಾರಂಭಿಸಿದರು.

Maharaja Trophy 2023: ಫೈನಲ್​ಗೆ ಲಗ್ಗೆಯಿಟ್ಟ ಹುಬ್ಬಳ್ಳಿ ಟೈಗರ್ಸ್​
Hubli Tigers
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಸೆಮಿಫೈನಲ್​ನಲ್ಲಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಹುಬ್ಬಳ್ಳಿ ಟೈಗರ್ಸ್ ತಂಡವು ಫೈನಲ್​ಗೆ ಪ್ರವೇಶಿಸಿದೆ. ಶಿವಮೊಗ್ಗ ಲಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಮನೀಶ್ ಪಾಂಡೆ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹನ್ ಕದಮ್ ಹಾಗೂ ನಿಹಾಲ್ ಉಳ್ಳಾಲ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪವರ್​ಪ್ಲೇನಲ್ಲಿ ಕೇವಲ 37 ರನ್​ಗಳಿಸಲಷ್ಟೇ ಶಕ್ತರಾದರು.

ಈ ಹಂತದಲ್ಲಿ ನಿಹಾಲ್ (7) ಔಟಾದರೆ, ಆ ಬಳಿಕ ಬಂದ ವಿನಯ್ ಸಾಗರ್ (12) ಹಾಗೂ ಅಭಿನವ್ ಮನೋಹರ್ (2) ಕೂಡ ಬೇಗನೆ ನಿರ್ಗಮಿಸಿದರು. ಇನ್ನು ಶರತ್ 18 ರನ್​ಗಳಿಸಿದರೆ, ನಾಯಕ ಶ್ರೇಯಸ್ ಗೋಪಾಲ್ 16 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಅಂತಿಮ ಹಂತದಲ್ಲಿ ಪ್ರಣವ್ ಭಾಟಿಯಾ 7 ಎಸೆತಗಳಲ್ಲಿ 16 ರನ್ ಬಾರಿಸುವ ಮೂಲಕ ಶಿವಮೊಗ್ಗ ಲಯನ್ಸ್ ತಂಡದ ಮೊತ್ತವನ್ನು 149-7 ಕ್ಕೆ ತಂದು ನಿಲ್ಲಿಸಿದರು.

150 ರನ್​ಗಳ ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಲವ್ನೀತ್ ಸಿಸೋಡಿಯಾ 13 ರನ್​ಗಳಿಸಿ 2ನೇ ಓವರ್​ನಲ್ಲೇ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸ್ಪೋಟಕ ದಾಂಡಿಗ ಮೊಹಮ್ಮದ್ ತಾಹ ಅಬ್ಬರಿಸಲಾರಂಭಿಸಿದರು.

ಇತ್ತ ತಾಹ ಅಬ್ಬರ ಆರಂಭವಾಗುತ್ತಿದ್ದಂತೆ ಶಿವಮೊಗ್ಗ ಲಯನ್ಸ್ ಬೌಲರ್​ಗಳು ಲಯ ತಪ್ಪಿದರು. ಇದರ ಲಾಭವನ್ನು ಪಡೆಯುವಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೃಷ್ಣನ್ ಶ್ರೀಜಿತ್ ಕೂಡ ಯಶಸ್ವಿಯಾದರು.

ಪರಿಣಾಮ ಮೊಹಮ್ಮದ್ ತಾಹ ಕೇವಲ 38 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 69 ರನ್ ಬಾರಿಸಿದರು. ಇನ್ನು ಶ್ರೀಜಿತ್ 39 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 61 ರನ್​ ಸಿಡಿಸಿ 14 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಗೆಲುವಿನೊಂದಿಗೆ ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಫೈನಲ್​ಗೆ ಪ್ರವೇಶಿಸಿದೆ.

ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಮೊಹಮ್ಮದ್ ತಾಹ , ಲವ್ನೀತ್ ಸಿಸೋಡಿಯಾ, ಕೃಷ್ಣನ್ ಶ್ರೀಜಿತ್ , ಮನೀಶ್ ಪಾಂಡೆ (ನಾಯಕ) , ಪ್ರವೀಣ್ ದುಬೆ , ಮನ್ವಂತ್ ಕುಮಾರ್ ಎಲ್ , ಸಂಜಯ್ ಅಶ್ವಿನ್ (ವಿಕೆಟ್ ಕೀಪರ್) , ಲವಿಶ್ ಕೌಶಲ್ , ಎಂಬಿ ದರ್ಶನ್ , ಕೆ ಸಿ ಕಾರಿಯಪ್ಪ , ವಿಧ್ವತ್ ಕಾವೇರಪ್ಪ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಶಿವಮೊಗ್ಗ ಲಯನ್ಸ್ ಪ್ಲೇಯಿಂಗ್ 11: ರೋಹನ್ ಕದಂ , ನಿಹಾಲ್ ಉಳ್ಳಾಲ್ ( ವಿಕೆಟ್ ಕೀಪರ್) , ವಿನಯ್ ಸಾಗರ್ , ಅಭಿನವ್ ಮನೋಹರ್ , ಶ್ರೇಯಸ್ ಗೋಪಾಲ್ ( ನಾಯಕ ) , ರೋಹಿತ್ ಕುಮಾರ್ ಕೆ , ಎಸ್ ಶಿವರಾಜ್ , ಕ್ರಾಂತಿ ಕುಮಾರ್ , ನಿಶ್ಚಿತ್ ಎನ್ ರಾವ್ , ಎಚ್ ಎಸ್ ಶರತ್ , ಪ್ರಣವ್ ಭಾಟಿಯಾ.