
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯ (Maharajah T20 Trophy) 19ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ (Mysuru-W vs Gulbarga Mystics) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ 20 ಓವರ್ಗಳಲ್ಲಿ ಬರೋಬ್ಬರಿ 210 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಪ್ರವೀಣ್ ದುಬೆ ಕೇವಲ 19 ಎಸೆತಗಳಲ್ಲಿ 7 ಸಿಕ್ಸರ್‌ಗಳ ಸಹಿತ ಅಜೇಯ 53 ರನ್ ಬಾರಿಸಿದರು. ಈ ಗೆಲುವಿನೊಂದಿಗೆ ಗುಲ್ಬರ್ಗಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಮೈಸೂರು ತಂಡ ನಾಲ್ಕನೇ ಸ್ಥಾನದಲ್ಲಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡಕ್ಕೆ ಮೊದಲ ಓವರ್ನಲ್ಲೇ ಆಘಾತ ಎದುರಾಯಿತು. ಆರಂಭಿಕ ಕಾರ್ತಿಕ್ 1 ರನ್ಗೆ ವಿಕೆಟ್ ಒಪ್ಪಿಸಿದರು. ಆ ನಂತರ ಮತ್ತೊಬ್ಬ ಆರಂಭಿಕ ಅಜಿತ್ ಕಾರ್ತಿಕ್ ಕೂಡ 17 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಮೂರನೇ ವಿಕೆಟ್ ಕೂಡ 37 ರನ್ಗಳಿಗೆ ಪತವಾಯಿತು. ಆದರೆ ಇಲ್ಲಿಂದ ಜೊತೆಯಾದ ವೆಂಕಟೇಶ್ ಹಾಗೂ ನಾಯಕ ಮನೀಶ್ ಪಾಂಡೆ ತಂಡವನ್ನು ನೂರು ರನ್ಗಳ ಗಡಿ ದಾಟಿಸಿದಲ್ಲದೆ ಅರ್ಧಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು.
ಆದಾಗ್ಯೂ ನಾಯಕ ಮನೀಶ್ ಇನ್ನಿಂಗ್ಸ್ 29 ರನ್ಗಳಿಗೆ ಅಂತ್ಯವಾಯಿತು. 6ನೇ ಕ್ರಮಾಂಕದಲ್ಲಿ ಬಂದ ಪರಂತಪ್, ವೆಂಕಟೇಶ್ ಜೊತೆಗೂಡಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ತಂಡವನ್ನು 200 ರನ್ಗಳ ಗಡಿ ದಾಟಿಸಿದರು. ಈ ವೇಲೆ ಪರಂತಪ್ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 48 ರನ್ ಬಾರಿಸಿ ಔಟಾದರೆ, ಅಜೇಯರಾಗಿ ಉಳಿದ ವೆಂಕಟೇಶ್ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 93 ರನ್ಗಳ ಇನ್ನಿಂಗ್ಸ್ ಆಡಿದರು.
ಈ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಆರಂಭಿಕ ಲವ್ನಿತ್ ಮೊದಲ ಓವರ್ನಲ್ಲೇ ಸತತ 4 ಸಿಕ್ಸರ್ ಬಾರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಹೀಗಾಗಿ ತಂಡ 4 ಓವರ್ಗಳ ಅಂತ್ಯಕ್ಕೆ 50 ರನ್ಗಳ ಗಡಿ ದಾಟುವುದರ ಜೊತೆಗೆ ಲವ್ನಿತ್ ರೂಪದಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಮುರನೇ ಕ್ರಮಾಂಕದಲ್ಲಿ ಬಂದ ಪವನ್ ಕೂಡ 7 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಈ ವೇಳೆ ನಿಖಿನ್ ಜೋಶ್ ಕೂಡ ರಿಟೈರ್ಡ್ ಹರ್ಟ್ ಆದರು. ಈ ಹಂತದಲ್ಲಿ ಜೊತೆಯಾದ ಸ್ಮರಣ್ ಹಾಗೂ ಸಿದ್ಧಾರ್ಥ್ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ಗೆಲುವಿನ ಹಾದಿಗೆ ಮರಳಿಸಿದರು.
ಆದರೆ ಇದೇ ವೇಳೆ ಹರ್ಷಿಲ್ ಹಿಡಿದ ಅತ್ಯದ್ಭುತ ಕ್ಯಾಚ್ನಿಂದಾಗಿ ಸ್ಮರಣ್ ಇನ್ನಿಂಗ್ಸ್ 38 ರನ್ಗಳಿಗೆ ಅಂತ್ಯವಾಯಿತು. ಆದಾಗ್ಯೂ ಸಿದ್ಧಾರ್ಥ್ ಜೊತೆಯಾದ ಪ್ರವೀಣ್ ಸಿಕ್ಸರ್‌ಗಳ ಮಳೆಗರೆಯುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. 18ನೇ ಓವರ್ನಲ್ಲಿ ಪಂದ್ಯದ ದಿಕ್ಕು ಬದಲಿಸಿದ ಪ್ರವೀಣ್ 3 ಸಿಕ್ಸರ್ ಬಾರಿಸಿದರು. ಹೀಗಾಗಿ ಕೊನೆಯ ಓವರ್ನಲ್ಲಿ ತಂಡದ ಗೆಲುವಿಗೆ 11 ರನ್ಗಳು ಬೇಕಾಗಿದ್ದವು. ಈ ವೇಳೆ ದಾಳಿಗಿಳಿದ ಕುಮಾರ್ ಮೊದಲ ಐದು ಎಸೆತಗಳಲ್ಲಿ 7 ರನ್ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಕೊನೆಯ ಎಸೆತದಲ್ಲಿ ಮೂರು ರನ್ ಬೇಕಿದ್ದವು. ಸ್ಟ್ರೈಕ್ನಲ್ಲಿದ್ದ ಪ್ರವೀಣ್ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರವೀಣ್ಗೆ ಸಾಥ್ ನೀಡಿದ ಸಿದ್ಧಾರ್ಥ್ 49 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Wed, 20 August 25