AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6… ಮೊದಲ ಓವರ್​ನಲ್ಲೇ ಸಿಕ್ಸರ್‌ಗಳ ಮಳೆಗರೆದ ಲವ್ನಿತ್; ಔಟಾದ ಬಳಿಕ ನಡೆಯಿತು ಜಗಳ! ವಿಡಿಯೋ

Maharaja T20 Trophy: ಮೈಸೂರು ವಾರಿಯರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ನಡುವಿನ ಮಹಾರಾಜ T20 ಟ್ರೋಫಿ ಪಂದ್ಯದಲ್ಲಿ ಗುಲ್ಬರ್ಗಾ ಆರಂಭಿಕ ಆಟಗಾರ ಲವ್ನಿತ್ ಸಿಸೋಡಿಯಾ ಅವರು ಮೊದಲ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ಅದ್ಭುತ ಆರಂಭ ನೀಡಿದರು. ಆದರೆ ನಂತರ ಅವರು ಔಟಾದ ಬಳಿಕ ಆಟಗಾರರ ನಡುವೆ ಜಗಳ ನಡೆಯಿತು. ಲವ್ನಿತ್ 13 ಎಸೆತಗಳಲ್ಲಿ 37 ರನ್ ಗಳಿಸಿದರು. ಈ ಪಂದ್ಯದಲ್ಲಿ ಮೈಸೂರು ತಂಡ 210 ರನ್ ಗಳಿಸಿತ್ತು

6,6,6,6... ಮೊದಲ ಓವರ್​ನಲ್ಲೇ ಸಿಕ್ಸರ್‌ಗಳ ಮಳೆಗರೆದ ಲವ್ನಿತ್; ಔಟಾದ ಬಳಿಕ ನಡೆಯಿತು ಜಗಳ! ವಿಡಿಯೋ
Luvnith Sisodia
ಪೃಥ್ವಿಶಂಕರ
|

Updated on:Aug 20, 2025 | 6:46 PM

Share

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯ (Maharajah T20 Trophy) 19ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ (Mysuru-W vs Gulbarga Mystics) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ 20 ಓವರ್​ಗಳಲ್ಲಿ ಬರೋಬ್ಬರಿ 210 ರನ್ ಕಲೆಹಾಕಿದೆ. ಇನ್ನು ಈ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಲವ್ನಿತ್ ಸಿಸೋಡಿಯಾ (Luvnith Sisodia) ಇನ್ನಿಂಗ್ಸ್​ನ ಮೊದಲ ಓವರ್​ನಲ್ಲಿಯೇ ಮೈಸೂರು ತಂಡದ ಅನುಭವಿ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರ ಓವರ್​ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ, ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಆದಾಗ್ಯೂ 4ನೇ ಓವರ್​ನಲ್ಲಿ ಅವರು ಔಟಾದ ಬಳಿಕ ಮೈದಾನದಲ್ಲಿ ಆಟಗಾರರ ನಡುವೆ ಜಗಳ ಕೂಡ ನಡೆಯಿತು.

ಮೊದಲ ಓವರ್​ನಲ್ಲೇ 4 ಸಿಕ್ಸರ್

ಮೈಸೂರು ತಂಡದ ಪರ ಅನುಭವಿ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಇನ್ನಿಂಗ್ಸ್​ನ ಮೊದಲ ಓವರ್ ಎಸೆಯುವ ಜವಾಬ್ದಾರಿ ಹೊತ್ತರು. ಇತ್ತ ಗುಲ್ಬರ್ಗಾ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಲವ್ನಿತ್​ಗೆ ಬೃಹತ್ ಮೊತ್ತ ಕಣ್ಣ ಮುಂದಿತ್ತು. ಹೀಗಾಗಿ ಅವರು ತಂಡಕ್ಕೆ ಸ್ಫೋಟಕ ಆರಂಭ ನೀಡಬೇಕಿತ್ತು. ಅದರಂತೆ ಲವ್ನಿತ್, ಗೌತಮ್ ಎಸೆದ ಇನ್ನಿಂಗ್ಸ್​ನ ಮೊದಲ ಓವರ್​ನ ಮೊದಲ 4 ಎಸೆತಗಳಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿದರು. ಮಿಡ್ ಆಫ್ ಮೇಲೆ ಮೊದಲ ಸಿಕ್ಸರ್ ಸಿಡಿಸಿದ ಲವ್ನಿತ್, ಎರಡನೇ ಸಿಕ್ಸರ್ ಅನ್ನು ಸ್ಕ್ವೈರ್ ಲೆಗ್​ ಮೇಲೆ ಬಾರಿಸಿದರು. ಮೂರನೇ ಸಿಕ್ಸರ್ ಮಿಡ್ ವಿಕೆಟ್ ಮೇಲೆ ಹಾರಿ ಹೊದರೆ, ಇತ್ತ ನಾಲ್ಕನೇ ಸಿಕ್ಸರ್ ಕೂಡ ಸ್ಕ್ವೈರ್ ಲೆಗ್ ದಿಕ್ಕಿನಲ್ಲಿ ಹೊಯಿತು. ಓವರ್​ನ ಉಳಿದ ಎರಡು ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ. ಆದಾಗ್ಯೂ ಈ ಓವರ್​ನಲ್ಲಿ ಲವ್ನಿತ್ 24 ರನ್ ಕಲೆಹಾಕಿದರು.

ಬೌಲರ್- ಲವ್ನಿತ್ ನಡುವೆ ಮಾತಿನ ಚಕಮಕಿ

ಆ ಬಳಿಕವೂ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿದ ಲವ್ನಿತ್ ಕೇವಲ 13 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 37 ರನ್ ಕಲೆಹಾಕಿದರು. ಅಂದರೆ ಕೇವಲ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ ಲವ್ನಿತ್ 34 ರನ್ ಸಿಡಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದರು. ಆದರೆ ಈ ವೇಳೆ ನಾಲ್ಕನೇ ಓವರ್ ಬೌಲ್ ಮಾಡಲು ದಾಳಿಗಿಳಿದ ಯುವ ವೇಗಿ ಗೌತಮ್ ಮಿಶ್ರ ಅವರು ಲವ್ನಿತ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಈ ಓವರ್​ನ ಐದನೇ ಎಸೆತವನ್ನು ಭರ್ಜರಿ ಸಿಕ್ಸರ್​ಗಟ್ಟಿದ್ದ ಲವ್ನಿತ್ ಕೊನೆಯ ಎಸೆತವನ್ನು ಸಿಕ್ಸರ್ ಬಾರಿಸುವ ಯತ್ನದಲ್ಲಿ ಮನೀಶ್ ಪಾಂಡೆಗೆ ಕ್ಯಾಚಿತ್ತು ಔಟಾದರು.

ಇತ್ತ ವಿಕೆಟ್ ಉರುಳಿಸಿದ ಖುಷಿಯಲ್ಲಿ ವೇಗಿ ಗೌತಮ್, ಲವ್ನಿತ್ ಅವರ ಬಳಿ ಹೋಗಿ ಏನನ್ನೋ ಹೇಳಿದರು. ಇದರಿಂದ ಕೋಪಗೊಂಡ ಲವ್ನಿತ್ ತಮ್ಮ ಬ್ಯಾಟ್ ತೋರಿಸಿ ಗೌತಮ್ ಬಳಿ ಮಾತಿಗಿಳಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಇತರೆ ಆಟಗಾರರು ಹಾಗೂ ಅಂಪೈರ್​ಗಳು ಇಬ್ಬರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಇತ್ತ ಲವ್ನಿತ್ ಡಗೌಟ್​ಗೆ ತೆರಳಿದ ಬಳಿಕವೂ ಅಂಪೈರ್ ಜೊತೆ ಗೌತಮ್ ವಿಚಾರಕ್ಕೆ ಆರೋಪ ಮಾಡುತ್ತಿರುವುದು ಕಂಡುಬಂದಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Wed, 20 August 25