ಚಾಂಪಿಯನ್ಸ್ ಟ್ರೋಫಿ ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿದ ಭಯೋತ್ಪಾದಕನ ಬೆಂಬಲಿಗ..!

|

Updated on: Feb 26, 2025 | 2:32 PM

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಉಗ್ರರ ಕರಿನೆರಳು ಬೀರಿದೆ. ಈ ಟೂರ್ನಿಯನ್ನು ವೀಕ್ಷಿಸಲು ಆಗಮಿಸುವ ವಿದೇಶಿ ಪ್ರಜೆಗಳನ್ನು ಅಪಹರಿಸಿ ಸುಲಿಗೆ ಮಾಡಲು ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ISKP) ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಿಗೆ ಕಟ್ಟೆಚ್ಚರವಹಿಸಲಾಗುತ್ತಿದೆ.

ಚಾಂಪಿಯನ್ಸ್ ಟ್ರೋಫಿ ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿದ ಭಯೋತ್ಪಾದಕನ ಬೆಂಬಲಿಗ..!
Pakistan
Follow us on

ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಯೋತ್ಪಾದಕರ ಭೀತಿ ಎದುರಾಗಿದೆ. ಐಎಸ್‌ಕೆಪಿ ಭಯೋತ್ಪಾದಕ ಗುಂಪು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿಗರನ್ನು ಅಪಹರಿಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ನ್ಯೂಝಿಲೆಂಡ್-ಬಾಂಗ್ಲಾದೇಶ್ ನಡುವಣ ಪಂದ್ಯದ ವೇಳೆ ಭಯೋತ್ಪಾದಕ ನಾಯಕನ ಬೆಂಬಲಿಗನೊಬ್ಬ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.

ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಯುವಕನೋರ್ವ ತೆಹ್ರೀಕ್-ಇ-ಲಬ್ಬೈಕ್ ಪಕ್ಷದ ನಾಯಕ ಸಾದ್ ರಿಝ್ವಿಯ ಫೋಟೋ ಹಿಡಿದು ಮೈದಾನಕ್ಕೆ ನುಗ್ಗಿದ್ದ. ಅಲ್ಲದೆ ನೇರವಾಗಿ ಬ್ಯಾಟ್ ಮಾಡುತ್ತಿದ್ದ ನ್ಯೂಝಿಲೆಂಡ್ ಆಟಗಾರ ರಚಿನ್ ರವೀಂದ್ರ ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾರೆ.

ಇದರಿಂದ ರಚಿನ್ ರವೀಂದ್ರ ಭಯಭೀತರಾದರು. ಅಷ್ಟರಲ್ಲಾಗಲೇ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿಗಳು ಯುವಕನನ್ನು ವಶಕ್ಕೆ ಪಡೆದು, ಕರೆದುಕೊಂಡು ಹೋಗಿದ್ದಾರೆ.

ಪಂದ್ಯ ನಡುವೆ ಮೈದಾನಕ್ಕೆ ನುಗ್ಗಿದ ಯುವಕನ ವಿಡಿಯೋ:

ಭಯೋತ್ಪಾದಕ ಸಾದ್ ರಿಝ್ವಿ:

ಕಟ್ಟರ್ ಬಲಪಂಥೀಯ ನಾಯಕರಾಗಿರುವ ಸಾದ್ ರಿಝ್ವಿ ಈ ಹಿಂದಿನಿಂದಲೂ ಉಗ್ರ ಚಟುವಟಿಕೆಗಳನ್ನು ಗುರುತಿಸಿಕೊಂಡಿದ್ದಾರೆ. ಅದರಲ್ಲೂ 2023 ರಲ್ಲಿ ಡಚ್ ಮೂಲದ ರಾಜಕಾರಣಿ ಗೀರ್ಟ್ ವೈಲ್ಡರ್ಸ್ ಹತ್ಯೆ ಮಾಡುವಂತೆ ಬಹಿರಂಗ ಕರೆ ನೀಡಿದ್ದರು.

ಇದಕ್ಕೂ ಮುನ್ನ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ಸರ್ಕಾರವು ತೆಹ್ರೀಕ್-ಇ-ಲಬ್ಬೈಕ್ ಪಕ್ಷವನ್ನು ಭಯೋತ್ಪಾದಕರ ಗುಂಪು ಎಂದು ಘೋಷಿಸಿ, ಸಾದ್ ರಿಝ್ವಿಯನ್ನು ಬಂಧಿಸಿದ್ದರು. ಆದರೆ ಆ ಬಳಿಕ ಪಾಕ್​ನಲ್ಲಿ ನಡೆದ ಉಗ್ರ ಪ್ರತಿಭಟನೆಯಿಂದಾಗಿ ರಿಝ್ವಿಯನ್ನು ಭಯೋತ್ಪಾದಕರ ಪಟ್ಟಿಯಿಂದ ಕೈ ಬಿಡಬೇಕಾಯಿತು.

ಇದಾದ ಬಳಿಕ ಸಾದ್ ರಿಝ್ವಿ ತನ್ನ ಪ್ರಚೋದನಾಕಾರಿ ಭಾಷಣೆಯೊಂದಿಗೆ ಪಾಕಿಸ್ತಾನದಲ್ಲಿ ತನ್ನ ವರ್ಚಸ್ಸನ್ನು ವರ್ಧಿಸಿದ್ದರು. ಇದೀಗ ಅದೇ ರಿಝ್ವಿ ಫೋಟೋದೊಂದಿಗೆ ರಾವಲ್ಪಿಂಡಿಯಲ್ಲಿ ಯುವಕನೋರ್ವ ಮೈದಾನಕ್ಕೆ ನುಗ್ಗಿರುವುದು ಆತಂಕಕ್ಕೆ ಕಾರಣವಾಗಿದೆ.

ಯುವಕನಿಗೆ ಬ್ಯಾನ್:

ಇನ್ನು ಮೈದಾನಕ್ಕೆ ನುಗ್ಗಿದ ಯುವಕನನ್ನು ಬಂಧಿಸಿರುವ ರಾವಲ್ಪಿಂಡಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅಲ್ಲದೆ ಆತನಿಗೆ ಪಾಕಿಸ್ತಾನದ ಎಲ್ಲಾ ಕ್ರಿಕೆಟ್ ಸ್ಥಳಗಳಿಗೆ ಪ್ರವೇಶಿಸುವುದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!

ಒಟ್ಟಿನಲ್ಲಿ 29 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಭದ್ರತಾ ಲೋಪ ಕಂಡು ಬಂದಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣದಿಂದಾಗಿ ಭಾರತ ತಂಡ ಪಾಕಿಸ್ತಾನದಲ್ಲಿ ಪಂದ್ಯಾವಳಿ ಆಡಲು ಹಿಂದೇಟು ಹಾಕಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.