ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ 4 ಪಂದ್ಯ ರದ್ದು..!
Champions Trophy 2025: ಚಾಂಪಿಯನ್ಸ್ ಟ್ರೋಫಿಯ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಆಸೀಸ್ ಪಡೆ ಪಾಲಿಗೆ ನಿರ್ಣಾಯಕ. ಏಕೆಂದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯವು ರದ್ದಾಗಿರುವ ಕಾರಣ ಆಸ್ಟ್ರೇಲಿಯಾ ಕೇವಲ 1 ಅಂಕವನ್ನು ಮಾತ್ರ ಪಡೆದುಕೊಂಡಿದೆ. ಹೀಗಾಗಿ ಅಫ್ಘಾನ್ ವಿರುದ್ಧ ಗೆದ್ದರೆ ಮಾತ್ರ ನೇರವಾಗಿ ಸೆಮಿಫೈನಲ್ಗೇರಬಹುದು.

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಅನಿರೀಕ್ಷಿತವಾಗಿ ವರುಣನ ಆಗಮನವಾಗಿದೆ. ಅದು ಕೂಡ ಆಸ್ಟ್ರೇಲಿಯಾದ ಪಂದ್ಯದ ವೇಳೆ. ಇದರೊಂದಿಗೆ ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್ ಪಂದ್ಯ ರದ್ದಾಗಿದೆ. ಈ ರದ್ದತಿಯಿಂದ ಅತೀ ಹೆಚ್ಚು ಆತಂಕಕ್ಕೆ ಒಳಗಾಗಿರುವುದು ಆಸೀಸ್ ಪಡೆ. ಏಕೆಂದರೆ ಆಸ್ಟ್ರೇಲಿಯಾ ತಂಡದ ಪಾಲಿಗೆ ವರುಣ ಅವಕೃಪೆ ತೋರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದಿನ ಎರಡು ಚಾಂಪಿಯನ್ಸ್ ಟ್ರೋಫಿ ಆವೃತ್ತಿಯಲ್ಲಿ ಆಸೀಸ್ ಪಾಲಿಗೆ ಮಳೆಯೇ ಕಂಟಕವಾಗಿ ಪರಿಣಮಿಸಿತ್ತು.
- 2013 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 7ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಿದ್ದವು. ಆದರೆ ಈ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಪರಿಣಾಮ ಆಸ್ಟ್ರೇಲಿಯಾಗೆ ಸೆಮಿಫೈನಲ್ಗೆ ಪ್ರವೇಶಿಸಲು ಸಾಧ್ಯವಾಗಿಲ್ಲ.
- 2017 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ಎರಡು ಮ್ಯಾಚ್ಗಳು ರದ್ದಾಗಿದ್ದವು. ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ವಿರುದ್ಧದ ಪಂದ್ಯಗಳು ಮಳೆಯಿಂದಾಗಿ ರದ್ದಾದ ಕಾರಣ ಆಸ್ಟ್ರೇಲಿಯಾ ಲೀಗ್ ಹಂತದಲ್ಲೇ ಹೊರಬಿತ್ತು.
- 2025ರ ಚಾಂಪಿಯನ್ಸ್ ಟ್ರೋಫಿಯ 7ನೇ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಪರಿಣಾಮ 2 ಅಂಕಗಳೊಂದಿಗೆ ಸೆಮಿಫೈನಲ್ಗೇರುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕೇವಲ ಒಂದು ಪಾಯಿಂಟ್ ಮಾತ್ರ ಲಭಿಸಿದೆ.
ಇನ್ನು ಆಸ್ಟ್ರೇಲಿಯಾ ತಂಡ ಸೆಮಿಫೈನಲ್ಗೇರಬೇಕಿದ್ದರೆ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಲೇಬೇಕು. ಇಲ್ಲದಿದ್ದರೆ ಉಳಿದ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಹೀಗಾಗಿ ಆಸ್ಟ್ರೇಲಿಯಾ ಪಾಲಿಗೆ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ ಮ್ಯಾಚ್ ಎನ್ನಬಹುದು.
ಒಟ್ಟಿನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ 16 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾ ಪಡೆಗೆ ಈ ಬಾರಿ ಕೂಡ ವರುಣ ಅಡ್ಡಿಯಾಗಿದ್ದು, ಇದಾಗ್ಯೂ ಕೊನೆಯ ಪಂದ್ಯದಲ್ಲಿ ಗೆದ್ದು ಆಸೀಸ್ ಪಡೆ 2009 ರ ಬಳಿಕ ಮತ್ತೊಮ್ಮೆ ಸೆಮಿಫೈನಲ್ಗೇರಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!