Malcolm Marshall: ಪುಂಡ ಪೋಕರಿಗಳ ತಾಣವಾದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನ ಸಮಾಧಿ
Malcolm Marshall: ವೆಸ್ಟ್ ಇಂಡೀಸ್ ಪರ 14 ವರ್ಷಗಳ ಕಾಲ ಆಡಿದ್ದ ಮಾಲ್ಕಮ್ ಮಾರ್ಷಲ್ 81 ಟೆಸ್ಟ್ ಪಂದ್ಯಗಳಿಂದ ಬರೋಬ್ಬರಿ 376 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 136 ಪಂದ್ಯಗಳಿಂದ 157 ವಿಕೆಟ್ ಉರುಳಿಸಿದ್ದಾರೆ. ಇದಲ್ಲದೆ ಬ್ಯಾಟಿಂಗ್ನಲ್ಲೂ ಮಿಂಚಿರುವ ಮಾರ್ಷಲ್ 2765 ರನ್ಗಳನ್ನು ಕಲೆಹಾಕಿದ್ದಾರೆ.
ಕಪ್ಪು ಅಮೃತಶಿಲೆಯಿಂದ ಕಟ್ಟಿದ ಸಮಾಧಿ… ಆ ಸಮಾಧಿ ಮೇಲೊಂದು ಚೆಂಡು… ಇದನ್ನು ಬಿಟ್ಟರೆ ಅಲ್ಲೇನು ವಿಶೇಷತೆ ಕಾಣಿಸುವುದಿಲ್ಲ. ಆದರೆ ಆ ಸಮಾಧಿ ಮೇಲಿರುವ ಚೆಂಡು ಗತಕಾಲದ ವೈಭವವನ್ನು ಸಾರಿ ಹೇಳುತ್ತಿರುವಂತಿತ್ತು. ಹೌದು, ಅಲ್ಲಿ ನೀರವ ಮೌನದಲ್ಲಿ ಮಲಗಿರುವುದು, ಒಂದು ಕಾಲದಲ್ಲಿ ಬ್ಯಾಟರ್ಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡಿದ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಮಾಲ್ಕಮ್ ಮಾರ್ಷಲ್ (Malcolm Marshall).
ವೆಸ್ಟ್ ಇಂಡೀಸ್ ಕ್ರಿಕೆಟ್ ಕಂಡ ದಿಗ್ಗಜ ಕ್ರಿಕೆಟಿಗನ ಸಮಾಧಿಯನ್ನು ಇಂದು ಯಾರು ಸಹ ತಿರುಗಿ ನೋಡುತ್ತಿಲ್ಲ. ಇಲ್ಲೊಬ್ಬರು ಸಾರ್ವಕಾಲಿಕ ಕ್ರಿಕೆಟಿಗ ಅಂತಿಮ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬುದು ಕೂಡ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಸಾಕ್ಷಿಯೇ ಈ ಸಮಾಧಿ ಬಳಿ ಕಾಣಿಸಿಕೊಂಡಿರುವ ಸಿಗರೇಟ್ ತುಂಡು ಮತ್ತು ಮದ್ಯದ ಬಾಟಲಿಗಳು.
ಒಂದು ಕಾಲದಲ್ಲಿ ಮಾಲ್ಕಮ್ ಮಾರ್ಷಲ್ ಅವರ ಬೌಲಿಂಗ್ ನೋಡಲೇಂಡೇ ಬಾರ್ಬಡೋಸ್ನ ಸ್ಟೇಡಿಯಂಗಳಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬುತ್ತಿದ್ದರು. ಮಾರ್ಷಲ್ ಅವರ ಬೆಂಕಿ ಚೆಂಡುಗಳನ್ನು ಎದುರಿಸುವ ಗಂಡೆದೆಯ ಭಂಟ ಯಾರಿದ್ದಾರೆಂದು ಅಭಿಮಾನಿಗಳು ಗ್ಯಾಲರಿಯಲ್ಲಿ ಕೂತು ಸವಾಲೆಸೆಯುತ್ತಿದ್ದರು. ಅದೇ ಮಾರ್ಷಲ್ ಅವರನ್ನು ಇಂದು ಯಾರು ಸಹ ತಿರುಗಿ ನೋಡುತ್ತಿಲ್ಲ.
ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳು ನಡೆಯುತ್ತಿದ್ದರೂ ಒಂದು ಕಾಲದಲ್ಲಿ ಕೆರಿಬಿಯನ್ ದ್ವೀಪದಲ್ಲಿ ಕ್ರಿಕೆಟ್ನ ಕಿಚ್ಚು ಹಚ್ಚಿದ್ದ ಆಟಗಾರಿನಿಗೆ ಕನಿಷ್ಠ ಗೌರವಾರ್ಥಕವಾಗಿ ಒಂದೇ ಒಂದು ಹೂ ಗುಚ್ಛ ಇಡಲಾಗಿಲ್ಲ.
ಪುಂಡರ ತಾಣ:
ಬ್ರಿಡ್ಜ್‌ಟೌನ್‌ನ ಗ್ರ್ಯಾಂಟ್ಲಿ ಆಡಮ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಣತಿ ದೂರಲ್ಲಿರುವ ಮಾಲ್ಕಮ್ ಮಾರ್ಷಲ್ ಅವರ ಸಮಾಧಿ ಈಗ ಪುಂಡ ಪೋಕರಿಗಳ ತಾಣ. ಅತ್ತ ಮಾರ್ಷಲ್ ನೀರವ ಮೌನದಲ್ಲಿ ಮಲಗಿದ್ದರೆ, ಇತ್ತ ಪುಂಡ ಪೋಕರಿಗಳು ಬಂದು ಹೋಗಿರುವುದಕ್ಕೆ ಸಾಕ್ಷಿಯಾಗಿ ಸಿಗರೇಟು ತುಂಡುಗಳು, ರಮ್ ಬಾಟಲಿಗಳ, ಒಡೆದ ಗಾಜಿನ ಚೂರುಗಳು ಕಾಣ ಸಿಗುತ್ತವೆ.
ಚಾಮೊಕ್ಸ್‌ನಲ್ಲಿರುವ ಸೇಂಟ್ ಬಾರ್ತಲೋಮೆವ್ ಚರ್ಚ್ನ ಅಧೀನದಲ್ಲಿರುವ ಈ ದಿಗ್ಗಜನ ಸಮಾಧಿಯ ಅವಶೇಷಗಳನ್ನು ಸೂಕ್ಷ್ಮತೆಯಿಂದ ಸಂರಕ್ಷಿಸಲು ಯಾರೂ ಕೂಡ ಬಯಸುತ್ತಿಲ್ಲ ಎಂಬುದೇ ಸತ್ಯ. ಏಕೆಂದರೆ ಅಲ್ಲಿ ಮಲಗಿರುವುದು ವೆಸ್ಟ್ ಇಂಡೀಸ್ ಕ್ರಿಕೆಟ್ ಕಂಡಂತಹ ಶ್ರೇಷ್ಠ ಆಟಗಾರ ಎಂಬುದು ಚರ್ಚ್ ಪಾದ್ರಿಗಳಿಗೆ ತಿಳಿದಿಲ್ಲ.
ಇನ್ನು ಕೆಲವರು ಅತ್ತ ಕಡೆ ತಲೆ ಹಾಕಿದವರೂ ಸಮಾಧಿ ಮೇಲೆ ಬರೆಯಲಾದ ಬರಹಗಳನ್ನು ಓದುವ ಒಲವಿನಲ್ಲಿಲ್ಲ. ಹೀಗಾಗಿಯೇ ಮಾಲ್ಕಮ್ ಮಾರ್ಷಲ್ ಅವರ ಸಮಾಧಿಯು ಅವನತಿಯತ್ತ ಸಾಗಿದೆ. ಆದರೂ ಯಾರೂ ಸಹ ಕ್ಯಾರೆ ಅನ್ನುತ್ತಿಲ್ಲ.
ಆದರೆ 80ರ ದಶಕದಲ್ಲಿ ವಿಂಡೀಸ್ ಕ್ರಿಕೆಟ್ನ ಗತವೈಭವನ್ನು ವೀಕ್ಷಿಸಿದವರಿಗೆ ಈಗಲೂ ಮಾಲ್ಕಮ್ ಮಾರ್ಷಲ್ ನೆನಪಿನಲ್ಲಿದ್ದಾರೆ. ಆ ಹೆಸರು ಕೇಳುತ್ತಿದ್ದಂತೆ ಕಿವಿಯಂಚಿನಲ್ಲಿ ಬೌನ್ಸರ್ ಒಂದು ಸಾಗಿದಂತೆ ರೋಮಾಂಚನಗೊಳ್ಳುತ್ತಾರೆ.
ಇದಾಗ್ಯೂ ಬಾರ್ಬಡೋಸ್ನಲ್ಲಿ ಮಾಲ್ಕಮ್ ಮಾರ್ಷಲ್ ಮಾತ್ರ ಮೌನದಲ್ಲಿದ್ದಾರೆ. ಆ ಮೌನದೊಂದಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಸ್ಮಶಾನ ಮೌನವು ಕೂಡ ಸೇರಿದೆ. ಇಲ್ಲದಿದ್ದರೆ ವಿಂಡೀಸ್ ಕ್ರಿಕೆಟ್ ಜಗತ್ತು ಕಂಡು ಶ್ರೇಷ್ಠ ಕ್ರಿಕೆಟಿಗನ ಸಮಾಧಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
ಮಾರ್ಷಲ್ ಪರಾಕ್ರಮ:
ವೆಸ್ಟ್ ಇಂಡೀಸ್ ಪರ 14 ವರ್ಷಗಳ ಕಾಲ ಆಡಿದ್ದ ಮಾಲ್ಕಮ್ ಮಾರ್ಷಲ್ 81 ಟೆಸ್ಟ್ ಪಂದ್ಯಗಳಿಂದ ಬರೋಬ್ಬರಿ 376 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 136 ಪಂದ್ಯಗಳಿಂದ 157 ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ: Phil Salt: 6,6,6,6,6: ಹೊಸ ದಾಖಲೆ ಬರೆದ ಫಿಲ್ ಸಾಲ್ಟ್
ಹೀಗೆ ದಶಕಗಳ ಕಾಲ ವೆಸ್ಟ್ ಇಂಡೀಸ್ ತಂಡದ ಬೌಲಿಂಗ್ ಶಕ್ತಿಯಾಗಿ ಕಾಣಿಸಿಕೊಂಡಿದ್ದ ಮಾಲ್ಕಮ್ ಮಾರ್ಷಲ್ ಅವರು 41ನೇ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ ಅಸುನೀಗಿದ್ದರು. ಇದೀಗ ಈ ಸಾರ್ವಕಾಲಿಕ ಕ್ರಿಕೆಟಿಗನ ಸಮಾಧಿಯು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಮಾತ್ರ ಖೇದಕರ.