ಚಾಂಪಿಯನ್ ಪಟ್ಟ ಅಲಂಕರಿಸಿದ ‘ಸೂಪರ್ ಜೈಂಟ್ಸ್​’

The Hundred 2026: ಇಂಗ್ಲೆಂಡ್‌ನಲ್ಲಿ ನಡೆದ 100 ಎಸೆತಗಳ 'ದಿ ಹಂಡ್ರೆಡ್' ಲೀಗ್ ಟೂರ್ನಿಗೆ ತೆರೆ ಬಿದ್ದಿದೆ. ಪುರುಷರ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮಹಿಳೆಯರ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ಕಿರೀಟ ಮುಡಿಗೇರಿಸಿಕೊಂಡಿದೆ.

ಚಾಂಪಿಯನ್ ಪಟ್ಟ ಅಲಂಕರಿಸಿದ ಸೂಪರ್ ಜೈಂಟ್ಸ್​
Manchester Super Giants
Image Credit source: MSG

Updated on: Aug 17, 2026 | 7:41 AM

ದಿ ಹಂಡ್ರೆಡ್ ಲೀಗ್​ನಲ್ಲಿ ಮ್ಯಾಚೆಂಸ್ಟರ್ ಸೂಪರ್ ಜೈಂಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆದ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು.

ರಾಕೆಟ್ಸ್ ಬೃಹತ್ ಮೊತ್ತ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡ ನಿಗದಿತ 100 ಎಸೆತಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜವಾಬ್ದಾರಿಯುತ ಆಟ ಹಾಗೂ ಆಲ್ ರೌಂಡರ್ ಗಳ ಬಿರುಸಿನ ಬ್ಯಾಟಿಂಗ್ ನೆರವಿನಿಂದ ರಾಕೆಟ್ಸ್​ ಪಡೆಯು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಸೈಫರ್ಟ್ ಸಿಡಿಲಬ್ಬರ:

159 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ನ್ಯೂಝಿಲೆಂಡ್‌ನ ಆರಂಭಿಕ ದಾಂಡಿಗ ಟಿಮ್ ಸೈಫರ್ಟ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆರಂಭದಿಂದಲೇ ಟ್ರೆಂಟ್ ರಾಕೆಟ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಸೈಫರ್ಟ್, ಕೇವಲ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 72 ರನ್ ಚಚ್ಚಿದರು. ಈ ಮೂಲಕ ‘ದಿ ಹಂಡ್ರೆಡ್’ ಫೈನಲ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಮೀರ್ ಸೃಷ್ಟಿಸಿದ ನಡುಕ:

ಒಂದು ಹಂತದಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್​ ಸುಲಭವಾಗಿ ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ (29 ರನ್‌ಗೆ 3 ವಿಕೆಟ್) ಸತತ ಆರು ಡಾಟ್ ಬಾಲ್‌ಗಳನ್ನು ಎಸೆದು, ಅಪಾಯಕಾರಿ ಬ್ಯಾಟರ್‌ಗಳಾದ ಹೆನ್ರಿಕ್ ಕ್ಲಾಸೆನ್ ಮತ್ತು ಮೈಕೇಲ್ ಬ್ರೇಸ್‌ವೆಲ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ಭರ್ಜರಿ ಟ್ವಿಸ್ಟ್ ನೀಡಿದರು.

ಡಾಸನ್ ವಿನ್ನಿಂಗ್ ಸಿಕ್ಸ್!

ಕೊನೆಯ 3 ಎಸೆತಗಳಲ್ಲಿ ಮ್ಯಾಂಚೆಸ್ಟರ್ ಗೆಲುವಿಗೆ 3 ರನ್ ಬೇಕಾಗಿದ್ದಾಗ, ಇಂಗ್ಲೆಂಡ್‌ನ ಅನುಭವಿ ಆಟಗಾರ ಲಿಯಾಮ್ ಡಾಸನ್ ಬೆನ್ ಸ್ಯಾಂಡರ್ಸನ್ ಎಸೆತವನ್ನು ಸಿಕ್ಸರ್​ಗೆ ಅಟ್ಟಿದರು. ಈ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್​ 98 ಎಸೆತಗಳಲ್ಲಿ 162 ರನ್​ಗಳಿಸಿ ಮ್ಯಾಂಚೆಸ್ಟರ್​ ಸೂಪರ್ ಜೈಂಟ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಟ್ರೆಂಟ್ ರಾಕೆಟ್ಸ್ ಪ್ಲೇಯಿಂಗ್ 11: ಬೆನ್ ಡಕೆಟ್ , ಫಿನ್ ಅಲೆನ್ , ಅನ್ಯೂರಿನ್ ಡೊನಾಲ್ಡ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ) , ಟಿಮ್ ಡೇವಿಡ್ , ಮಿಚೆಲ್ ಸ್ಯಾಂಟ್ನರ್ , ಲೂಯಿಸ್ ಗ್ರೆಗೊರಿ , ಕ್ಯಾಲ್ವಿನ್ ಹ್ಯಾರಿಸನ್ , ಕ್ರೇಗ್ ಓವರ್ಟನ್ , ಬೆನ್ ಸ್ಯಾಂಡರ್ಸನ್ , ಮೊಹಮ್ಮದ್ ಅಮೀರ್.

ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್​ ಪ್ಲೇಯಿಂಗ್ 11: ಟಿಮ್ ಸೈಫರ್ಟ್ , ಪಾಲ್ ವಾಲ್ಟರ್ , ಜೋಸ್ ಬಟ್ಲರ್ (ನಾಯಕ) , ಹೆನ್ರಿಕ್ ಕ್ಲಾಸೆನ್ , ಮೈಕೆಲ್ ಬ್ರೇಸ್‌ವೆಲ್ , ಲ್ಯೂಸ್ ಡು ಪ್ಲೂಯ್ , ಲಿಯಾಮ್ ಡಾಸನ್ , ಗಸ್ ಅಟ್ಕಿನ್ಸನ್ , ನೂರ್ ಅಹ್ಮದ್ , ಸೋನಿ ಬೇಕರ್ , ಜೋಶ್ ಟಂಗ್.

ಸೂಪರ್ ಜೈಂಟ್ಸ್​ಗೆ ಚೊಚ್ಚಲ ಟ್ರೋಫಿ:

ಸಂಜೀವ್ ಗೊಯೆಂಕಾ ಮಾಲೀಕತ್ವದ ಆರ್‌ಪಿಎಸ್‌ಜಿ (RPSG) ಗ್ರೂಪ್ ಒಡೆತನದ ‘ಸೂಪರ್ ಜೈಂಟ್ಸ್’ ಫ್ರಾಂಚೈಸಿಗೆ ಒಲಿದ ಮೊದಲ ಟ್ರೋಫಿ ಇದಾಗಿದೆ. ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡಗಳನ್ನು ಈಗಾಗಲೇ ಕಣಕ್ಕಿಳಿಸಿದ್ದರೂ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಹೆಸರಿನಲ್ಲಿ ಕಣಕ್ಕಿಳಿದ ಮೊದಲ ವರ್ಷದಲ್ಲೇ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

Published On - 7:39 am, Mon, 17 August 26

Loading...
Unable to load recommendations.
Follow Us