AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

WTC 2027: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ನಿವೃತ್ತಿಯ ನಂತರ, ಹೊಸ ನಾಯಕ ಶುಭ್‌ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ಸಾರಥ್ಯದ ಯುವ ಟೀಮ್ ಇಂಡಿಯಾ ಈಗ ಅಕ್ಷರಶಃ ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಇತ್ತೀಚಿನ ಸರಣಿ ಹಿನ್ನಡೆಗಳಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಭಾರಿ ಕುಸಿತ ಕಂಡಿರುವ ಭಾರತ ತಂಡಕ್ಕೆ, ಲಂಡನ್‌ನ 'ದಿ ಓವಲ್' ಮೈದಾನದಲ್ಲಿ ನಡೆಯಲಿರುವ ಮಹಾಸಮರಕ್ಕೆ ಟಿಕೆಟ್ ಪಡೆಯುವುದೇ ದೊಡ್ಡ ಸವಾಲು.

9, 8, 7... ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ
WTC - Team IndiaImage Credit source: BCCI
ಝಾಹಿರ್ ಯೂಸುಫ್
|

Updated on: Aug 12, 2026 | 10:37 AM

Share

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಲೆಕ್ಕಾಚಾರಗಳು ಶುರುವಾಗಿದೆ.ಪ್ರಸ್ತುತ ಸಮೀಕರಣಗಳ ಪ್ರಕಾರ, ಭಾರತ ತಂಡವು ತನ್ನ ಮುಂದಿನ 9 ಪಂದ್ಯಗಳಲ್ಲೂ ಜಯ ಸಾಧಿಸಿದರೆ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಫೈನಲ್‌ಗೆ ಲಗ್ಗೆ ಇಡಬಹುದು. ಆದರೆ, ಈ ಹಾದಿ ಅಷ್ಟು ಸುಲಭವಲ್ಲ, ಇಲ್ಲಿ ಟೀಮ್ ಇಂಡಿಯಾದ ಎದುರಾಳಿಗಳ ಬಲಿಷ್ಠತೆಯನ್ನೂ ಸಹ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಟೀಮ್ ಇಂಡಿಯಾದ ಪ್ರಸ್ತುತ ಸ್ಥಿತಿ:

ಸದ್ಯದ ಅಂಕಪಟ್ಟಿಯಲ್ಲಿ ಭಾರತ 48.15% ಪಾಯಿಂಟ್ಸ್ ಪರ್ಸೆಂಟೇಜ್ (PCT) ನೊಂದಿಗೆ ಐದನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಕನಿಷ್ಠ 60% ಪ್ಲಸ್ PCT ಸುರಕ್ಷಿತ ವಲಯ. ಇದನ್ನು ತಲುಪಲು ಭಾರತ ತಂಡಕ್ಕೆ ಈಗ ಉಳಿದಿರುವುದು ಕೇವಲ 9 ಟೆಸ್ಟ್ ಪಂದ್ಯಗಳು ಮಾತ್ರ.

  • ಉಳಿದಿರುವ ಪಂದ್ಯಗಳು: 9 ಟೆಸ್ಟ್
  • ಅಗತ್ಯವಿರುವ ಗೆಲುವುಗಳು: ಕನಿಷ್ಠ 7 ಪಂದ್ಯಗಳು.

ಮುಂದಿರುವ ಸವಾಲುಗಳು:

  • ಶ್ರೀಲಂಕಾ ಪ್ರವಾಸ (ಆಗಸ್ಟ್ 2026): ಲಂಕಾ ವಿರುದ್ಧದ 2 ಟೆಸ್ಟ್‌ಗಳ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧಿಸಲೇಬೇಕು.
  • ನ್ಯೂಝಿಲೆಂಡ್ ಪ್ರವಾಸ (ನವೆಂಬರ್ 2026): ಕಿವೀಸ್ ನಾಡಿನಲ್ಲಿ 2 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಬೇಕು.
  • ಬಾರ್ಡರ್-ಗವಾಸ್ಕರ್ ಟ್ರೋಫಿ (ಜನವರಿ-ಫೆಬ್ರವರಿ 2027): ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್‌ಗಳ ಮಹಾಸಮರ. ಕಾಂಗರೂಗಳನ್ನು ಧೂಳೀಪಟ ಮಾಡುವುದು ಅನಿವಾರ್ಯ.

ಟೀಮ್ ಇಂಡಿಯಾ ಲೆಕ್ಕಾಚಾರ:

ಭಾರತ ಸದ್ಯದ ಸ್ಥಿತಿಯಿಂದ ಸುಮಾರು 60% PCT ಸುರಕ್ಷಿತ ವಲಯ ತಲುಪಲು ಇನ್ನುಳಿದ 9 ಟೆಸ್ಟ್ ಪಂದ್ಯಗಳಿಂದ ಕನಿಷ್ಠ 78 ಪಾಯಿಂಟ್ಸ್ ಗಳಿಸಬೇಕು. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನಿಯಮದಂತೆ ಪ್ರತಿ ಗೆಲುವಿಗೆ 12 ಪಾಯಿಂಟ್ಸ್ ಮತ್ತು ಡ್ರಾ ಸಾಧಿಸಿದರೆ 4 ಪಾಯಿಂಟ್ಸ್ ಸಿಗುತ್ತವೆ. ಅದರಂತೆ ಟೀಮ್ ಇಂಡಿಯಾದ ಲೆಕ್ಕಾಚಾರ ಈ ಕೆಳಗಿನಂತಿದೆ…

  • 9 ಗೆಲುವು (74% PCT): ಇನ್ನುಳಿದ ಎಲ್ಲಾ 9 ಪಂದ್ಯಗಳನ್ನೂ ಗೆದ್ದರೆ ಭಾರತ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಫೈನಲ್ ಪ್ರವೇಶಿಸಲಿದೆ.
  • 8 ಗೆಲುವು + 1 ಸೋಲು (68.5% PCT): ಟೀಮ್ ಇಂಡಿಯಾ ಮುಂದಿನ 9 ಪಂದ್ಯಗಳಲ್ಲಿ 8 ಗೆಲುವು ಹಾಗೂ 1 ಸೋಲನುಭವಿಸಿದರೂ ಫೈನಲ್ ತಲುಪುವ ಸಾಧ್ಯತೆ ಶೇ. 99ರಷ್ಟಿರುತ್ತದೆ.
  • 7 ಗೆಲುವು + 2 ಸೋಲು (63% PCT): ಟೀಮ್ ಇಂಡಿಯಾ ಮುಂದಿನ 9 ಮ್ಯಾಚ್​ಗಳಲ್ಲಿ 2 ಸೋಲುಂಡು, 7 ರಲ್ಲಿ ಜಯ ಸಾಧಿಸಿದರೂ 63% PCT ಯೊಂದಿಗೆ ಫೈನಲ್​ಗೇರಬಹುದು.
  • 6 ಗೆಲುವು + 2 ಡ್ರಾ + 1 ಸೋಲು (59% PCT):  ಟೀಮ್ ಇಂಡಿಯಾ ಮುಂದಿನ 9 ಮ್ಯಾಚ್​ಗಳಲ್ಲಿ 2 ಡ್ರಾ ಹಾಗೂ 1 ಪಂದ್ಯದಲ್ಲಿ ಸೋಲು ಕಂಡರೆ, ಫೈನಲ್​ ಹಾದಿ ಕಠಿಣವಾಗುತ್ತದೆ. ಅಂದರೆ 59% PCT ಯೊಂದಿಗೆ ಫೈನಲ್​ಗೆ ತಲುಪಬೇಕಿದ್ದರೆ ಅಂಕ ಪಟ್ಟಿಯಲ್ಲಿ ಮೇಲಿರುವ ಇತರ ತಂಡಗಳು (ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಇತ್ಯಾದಿ) ತಮ್ಮ ಪಂದ್ಯಗಳಲ್ಲಿ ಸೋಲುವುದನ್ನು ಟೀಮ್ ಇಂಡಿಯಾ ಎದುರು ನೋಡಬೇಕಾಗುತ್ತದೆ.

ಇದನ್ನೂ ಓದಿ: ರಾಕಿ ಎಂಟ್ರಿ… 136 ವರ್ಷಗಳ ಹಳೆಯ ದಾಖಲೆ ಧೂಳೀಪಟ!

ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾ ಮುಂದಿರುವ ಹಾದಿ ಕೇವಲ ಕಠಿಣವಲ್ಲ, ಅಕ್ಷರಶಃ ಮುಳ್ಳಿನ ಹಾಸಿಗೆಯಾಗಿದೆ. ರೋಹಿತ್-ಕೊಹ್ಲಿ ಯುಗದ ನಂತರದ ಈ ಪರಿವರ್ತನಾ ಹಂತದಲ್ಲಿ, ಗಂಭೀರ್ ಅವರ ತಂತ್ರಗಾರಿಕೆ ಹಾಗೂ ಶುಭ್‌ಮನ್ ಗಿಲ್ ಅವರ ನಾಯಕತ್ವಕ್ಕೆ ಇದಕ್ಕಿಂತ ದೊಡ್ಡ ಸವಾಲು ಮತ್ತೊಂದಿಲ್ಲ. ಪ್ರತಿ ಪಂದ್ಯವೂ ‘ಡು ಆರ್ ಡೈ’ ಎಂಬಂತಾಗಿರುವ ಈ ಪರಿಸ್ಥಿತಿಯಲ್ಲಿ ಯುವ ಭಾರತ ಪಡೆ ಇತಿಹಾಸ ಸೃಷ್ಟಿಸಿ, ಲಂಡನ್‌ನ ‘ದಿ ಓವಲ್’ ಮೈದಾನಕ್ಕೆ ಲಗ್ಗೆ ಇಡುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.

Follow Us