
ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ (Manchester Test) ಆತಿಥೇಯ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆತಿಥೇಯರು ಭಾರತದ ವಿರುದ್ಧ 311 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 358 ರನ್ ಗಳಿಸಿದರೆ, ಇತ್ತ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ (Joe Root) ಮತ್ತು ಬೆನ್ ಸ್ಟೋಕ್ಸ್ (Ben Stokes) ಶತಕ ಬಾರಿಸಿದರೆ, ಮೂವರು ಬ್ಯಾಟರ್ಗಳು ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಭಾರತ ಪರ ರವೀಂದ್ರ ಜಡೇಜಾ (Ravindra Jadeja) ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಜಸ್ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು.
ಏಳು ವಿಕೆಟ್‌ಗಳಿಗೆ 544 ರನ್‌ಗಳೊಂದಿಗೆ 4ನೇ ದಿನದಾಟವನ್ನು ಪ್ರಾರಂಭಿಸಿದ ಇಂಗ್ಲೆಂಡ್ ಮೊದಲ ಸೆಷನ್‌ನಲ್ಲಿ 125 ರನ್ ಗಳಿಸಿ 669 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕ ಬೆನ್ ಸ್ಟೋಕ್ಸ್ 198 ಎಸೆತಗಳಲ್ಲಿ 141 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಬ್ಯಾಟ್‌ನಿಂದ 11 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಸಿಡಿದವು. ಇದಲ್ಲದೆ ಸ್ಟೋಕ್ಸ್ ಒಂಬತ್ತನೇ ವಿಕೆಟ್‌ಗೆ ಬ್ರೈಡನ್ ಕಾರ್ಸೆ ಅವರೊಂದಿಗೆ 97 ಎಸೆತಗಳಲ್ಲಿ 95 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಇದಕ್ಕೂ ಮೊದಲು, ಜಸ್ಪ್ರೀತ್ ಬುಮ್ರಾ ಲಿಯಾಮ್ ಡಾಸನ್ ಅವರನ್ನು 26 ರನ್‌ಗಳಿಗೆ ಪೆವಿಲಿಯನ್ ಕಳುಹಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಗಳ ಪಟ್ಟಿಯಲ್ಲಿ ಬುಮ್ರಾ ಜಂಟಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಾಜಿ ವೇಗಿ ಇಶಾಂತ್ ಶರ್ಮಾ ಕೂಡ ಇಂಗ್ಲೆಂಡ್ ನೆಲದಲ್ಲಿ 51 ವಿಕೆಟ್ ಉರುಳಿಸಿದ್ದು, ಮೊದಲ ಸ್ಥಾನದಲಿದ್ದಾರೆ. ಅಂತಿಮವಾಗಿ ಕ್ರಿಸ್ ವೋಕ್ಸ್ 4, ಬ್ರೈಡನ್ ಕಾರ್ಸೆ 47 ಮತ್ತು ಜೋಫ್ರಾ ಆರ್ಚರ್ ಎರಡು ರನ್ ಗಳಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
IND vs ENG: ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಅನಗತ್ಯ ಶತಕ ಬಾರಿಸಿದ ಜಸ್ಪ್ರೀತ್ ಬುಮ್ರಾ
ಭಾರತದ ಪರ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರು. ಚೊಚ್ಚಲ ಪಂದ್ಯವನ್ನಾಡಿದ ಅನ್ಶುಲ್ ಕಾಂಬೋಜ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Sat, 26 July 25