
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟಿ20 ಟ್ರೋಫಿಯ (Maharaja T20 Trophy) ಫೈನಲ್ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡವು, ಹುಬ್ಬಳ್ಳಿ ಟೈಗರ್ಸ್ ತಂಡವನ್ನು (Hubli Tigers vs Mangaluru Dragons) ವಿ ಜಯದೇವನ್ ನಿಯಮದಡಿಯಲ್ಲಿ (VJD (V Jayadevan) Method) 8 ವಿಕೆಟ್ಗಳಿಂದ ಮಣಿಸಿ ಮೊದಲ ಬಾರಿಗೆ ಮಹಾರಾಜ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡವು 8 ವಿಕೆಟ್‌ಗಳ ನಷ್ಟಕ್ಕೆ 154 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮಂಗಳೂರು ತಂಡ 10.4 ಓವರ್ಗಳ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 85 ರನ್ ಕಲೆಹಾಕಿತ್ತು. ಆದರೆ ಈ ವೇಳೆಗೆ ಮಳೆ ಧಾರಕಾರವಾಗಿ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಸಾಕಷ್ಟು ಸಮಯ ಕಾದ ಬಳಿಕವೂ ಮಳೆ ನಿಲ್ಲಲಿಲ್ಲ. ಹೀಗಾಗಿ ವಿ ಜಯದೇವನ್ ನಿಯಮದಡಿಯಲ್ಲಿ ಮಂಗಳೂರು ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ವಾಸ್ತವವಾಗಿ ಇದೇ ಮಂಗಳೂರು ಡ್ರಾಗನ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮಂಗಳೂರು ತಂಡವನ್ನು ಮಣಿಸಿದ್ದ ಹುಬ್ಬಳ್ಳಿ ತಂಡ ನೇರವಾಗಿ ಫೈನಲ್ಗೇರಿತ್ತು. ಆ ಬಳಿಕ ನಡೆದಿದ್ದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿದ್ದ ಮಂಗಳೂರು ತಂಡ ಮತ್ತೊಮ್ಮೆ ಫೈನಲ್ನಲ್ಲಿ ಹುಬ್ಬಳ್ಳಿ ತಂಡಕ್ಕೆ ಎದುರಾಳಿಯಾಗಿತ್ತು. ಒಂದೆಡೆ ಹುಬ್ಬಳ್ಳಿ ತಂಡಕ್ಕೆ ಹಿಂದಿನ ಗೆಲುವಿನ ಬಲ ಸಿಕ್ಕಿದ್ದರೆ, ಇತ್ತ ಮಂಗಳೂರು ತಂಡಕ್ಕೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿತ್ತು. ಅದರಂತೆ ಇಂದು ನಡೆದ ಫೈನಲ್ನಲ್ಲಿ ಹುಬ್ಬಳ್ಳಿ ತಂಡವನ್ನು ಮಣಿಸುವಲ್ಲಿ ಮಂಗಳೂರು ಯಶಸ್ವಿಯಾಯಿತು.
𝐏𝐫𝐞𝐬𝐞𝐧𝐭𝐢𝐧𝐠 𝐭𝐨 𝐲𝐨𝐮 𝐭𝐡𝐞 #𝐒𝐞𝐚𝐬𝐨𝐧𝟒 𝐂𝐡𝐚𝐦𝐩𝐢𝐨𝐧𝐬 🏆#ಆಡಕ್ಕೂರೆಡಿಆಳಕ್ಕೂರೆಡಿ #ShriramCapitalMaharajaTrophy #MaharajaTrophy pic.twitter.com/d63RKcaMzq
— Maharaja Trophy T20 (@maharaja_t20) August 28, 2025
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. 38 ರನ್ಗಳಿಗೆ ತಂಡದ ಮೊದಲ ವಿಕೆಟ್ ಪತನವಾಯಿತು. ಕ್ವಾಲಿಫೈಯರ್ 1 ಪಂದ್ಯದಲ್ಲಿ ಇದೇ ಮಂಗಳೂರು ವಿರುದ್ಧ ಅಜೇಯ 99 ರನ್ ಬಾರಿಸಿದ್ದ ನಾಯಕ ದೇವದತ್ ಪಡಿಕಲ್, ಇಂದು ನಡೆದ ಫೈನಲ್ ಪಂದ್ಯದಲ್ಲಿ ಕೇವಲ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ತಂಡದ ಸೋಲಿಗೆ ಇದು ಕೂಡ ಪ್ರಮುಖ ಕಾರಣವಾಯಿತು. ಮತ್ತೊಬ್ಬ ಆರಂಭಿಕ ಮೊಹಮ್ಮದ್ ತಾಹ ಕೂಡ 27 ರನ್ಗಳಿಗೆ ಸುಸ್ತಾದರು.
ಕಾರ್ತಿಕೇಯ ಇನ್ನಿಂಗ್ಸ್ ಕೂಡ 8 ರನ್ಗಳಿಗೆ ಅಂತ್ಯವಾಯಿತು. ರಿತೇಶ್ 13 ರನ್ ಬಾರಿಸಿದರೆ, ಸ್ಫೋಟಕ ದಾಂಟಿಗ ಅಭಿನವ್ ಮನೋಹರ್ ಕೇವಲ 17 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕೆಳಕ್ರಮಾಂಕದಲ್ಲಿ ತಂಡಕ್ಕೆ ರನ್ಗಳ ಮಳೆ ಹರಿಸುತ್ತಿದ್ದ ಅಭಿನವ್ ಫೈನಲ್ ಪಂದ್ಯದಲ್ಲಿ ಪರಿಣಾಮಕಾರಿಯಾಗಲಿಲ್ಲ. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನೀಡಿದ ಕೆ ಶ್ರೀಜಿತ್ 52 ರನ್ಗಳ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ತಂಡ 8 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತು.
ಇತ್ತ 154 ರನ್ಗಳ ಗುರಿ ಬೆನ್ನಟ್ಟಿದ ಮಂಗಳೂರು ತಂಡ ಆರಂಭದಲ್ಲಿ ಮುಕ್ತವಾಗಿ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಹುಬ್ಬಳ್ಳಿ ತಂಡದ ಬೌಲರ್ಗಳು ಮಾಡಿದ ಎಡವಟ್ಟು ಮಂಗಳೂರು ಬ್ಯಾಟರ್ಗಳಿಗೆ ವರವಾಯಿತು. ಹುಬ್ಬಳ್ಳಿ ತಂಡದ ಸ್ಪಿನ್ನರ್ಗಳು ನೋ ಬಾಲ್ ಮಾಡುವ ಮೂಲಕ ಆರಂಭಿಕ ಶರತ್ಗೆ ಜೀವದಾನ ನೀಡಿ ದೊಡ್ಡ ತಪ್ಪು ಮಾಡಿದರು. ಇದು ಮಾತ್ರವಲ್ಲದೆ ವಿಕೆಟ್ ಕೀಪರ್ ಕೂಡ ಶರತ್ ಅವರ ಸುಲಭ ಸ್ಟಂಪ್ ಔಟ್ ಅನ್ನು ಮಿಸ್ ಮಾಡಿದರು. ಇದರ ಲಾಭ ಪಡೆದ ಶರತ್, ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಆದಾಗ್ಯೂ ಅರ್ಧಶತಕದಂಚಿನಲ್ಲಿ ಎಡವಿದ ಶರತ್ 49 ರನ್ಗಳಿಗೆ ಔಟಾದರು. ಮತ್ತೊಬ್ಬ ಆರಂಬಿಕ ಲೋಚನ್ 18 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಕೆಲವೇ ಓವರ್ಗಳ ಅಂತರದಲ್ಲಿ ಇವರಿಬ್ಬರ ವಿಕೆಟ್ ಉರುಳಿಸುವ ಮೂಲಕ ಹುಬ್ಬಳ್ಳಿ ತಂಡ ಮತ್ತೆ ಮೇಲುಗೈ ಸಾಧಿಸುತ್ತಿರುವಂತೆ ಕಂಡುಬಂತು ಆದರೆ ಆ ವೇಳೆಗೆ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಆ ನಂತರ ವಿ ಜಯದೇವನ್ ನಿಯಮದ ಪ್ರಕಾರ ಮಂಗಳೂರು ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಒಂದು ವೇಳೆ ಹುಬ್ಬಳ್ಳಿ ತಂಡ ಆರಂಭದಿಂದಲೇ ರನ್ಗಳಿಗೆ ಕಡಿವಾಣ ಹಾಕಿದರೆ, ಅದಕ್ಕೆ ಚಾಂಪಿಯನ್ ಪಟ್ಟ ಒಲಿಯುವ ಸಾಧ್ಯತೆಗಳಿದ್ದವು.
Published On - 10:44 pm, Thu, 28 August 25