AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಶಾಂತ್​ಗೆ ಹರ್ಭಜನ್ ಕಪಾಳಮೋಕ್ಷ; 18 ವರ್ಷಗಳ ಬಳಿಕ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ

ಶ್ರೀಶಾಂತ್​ಗೆ ಹರ್ಭಜನ್ ಕಪಾಳಮೋಕ್ಷ; 18 ವರ್ಷಗಳ ಬಳಿಕ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ

ಪೃಥ್ವಿಶಂಕರ
|

Updated on:Aug 29, 2025 | 4:43 PM

Share

Harbhajan Singh Slaps Sreesanth: 2008ರ ಐಪಿಎಲ್‌ನಲ್ಲಿ ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವೆ ನಡೆದ ಕಪಾಳಮೋಕ್ಷದ ವಿವಾದ ಮತ್ತೆ ಸುದ್ದಿಯಾಗಿದೆ. ಲಲಿತ್ ಮೋದಿ ಅವರು ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಂದ್ಯದ ನಂತರ ನಡೆದ ಈ ಘಟನೆಯಲ್ಲಿ ಹರ್ಭಜನ್ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು. ಈ ವಿವಾದ ಐಪಿಎಲ್ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದೆ.

2008 ರಲ್ಲಿ ಆರಂಭವಾದ ಐಪಿಎಲ್ ಇದುವರೆಗೆ 18 ಆವೃತ್ತಿಗಳನ್ನು ಕಂಡಿದೆ. ಕ್ರಿಕೆಟಿಗರ ಮೇಲೆ ಹಣದ ಹೊಳೆಯನ್ನೇ ಹರಿಸುವ ಈ ಮಿಲಿಯನ್ ಡಾಲರ್ ಟೂರ್ನಿಯ ಪ್ರತಿಯೊಂದು ಆವೃತ್ತಿಯಲ್ಲೂ ಒಂದಿಲ್ಲೊಂದು ವಿವಾದಗಳು ಮುನ್ನಲೆಗೆ ಬರುತ್ತವೆ. ಅಂತಹದ್ದೇ ವಿವಾದವೊಂದು ಐಪಿಎಲ್​ನ ಚೊಚ್ಚಲ ಆವೃತ್ತಿಯಲ್ಲೇ ನಡೆದು ಹೋಗಿತ್ತು. ಭಾರತ ಕ್ರಿಕೆಟ್​ನಲ್ಲಿ ಟರ್ಬನೇಟರ್ ಎಂದೇ ಪ್ರಸಿದ್ಧರಾಗಿರುವ ಹರ್ಭಜನ್ ಸಿಂಗ್, ತಂಡದ ಸಹ ಆಟಗಾರ ಶ್ರೀಶಾಂತ್ ಅವರಿಗೆ ಮೈದಾನದಲ್ಲೇ ಕಪಾಳ ಮೋಕ್ಷ ಮಾಡಿ ವಿವಾದ ಮಾಡಿಕೊಂಡಿದ್ದರು. ಈ ತಪ್ಪಿಗೆ ಹರ್ಭಜನ್​ಗೆ ಶಿಕ್ಷೆಯೂ ಆಗಿತ್ತು. ಈ ಘಟನೆ ನಡೆದು 18 ವರ್ಷಗಳು ಕಳೆದುಹೋಗಿವೆ. ಆದಗ್ಯೂ ಈ ಘಟನೆಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತವೆ. ಅದರಂತೆ ಇದೀಗ ಮತ್ತೊಮ್ಮೆ ಆ ವಿವಾದ ಚರ್ಚೆಯಲ್ಲಿದೆ.

ವಾಸ್ತವವಾಗಿ 2008 ರ ಐಪಿಎಲ್ ವೇಳೆ ಹರ್ಭಜನ್ ಸಿಂಗ್ ಮುಂಬೈ ತಂಡದ ಪರ ಆಡುತ್ತಿದ್ದರು. ಇತ್ತ ಶ್ರೀಶಾಂತ್ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದಲ್ಲಿದ್ದರು. ಉಭಯ ತಂಡಗಳ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮುಂಬೈ ತಂಡ ಸೋಲನುಭವಿಸಿತ್ತು. ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು ಹಸ್ತಲಾಘವ ಮಾಡುತ್ತಿದ್ದರು. ಈ ವೇಳೆ ಸೋತ ಹತಾಶೆಯಲ್ಲಿದ್ದ ಹರ್ಭಜನ್ ಎದುರಾಳಿ ತಂಡದ ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದರು. ಇದು ಐಪಿಎಲ್‌ನಲ್ಲಿ ಭಾರಿ ಸಂಚಲನವನ್ನೇ ಉಂಟು ಮಾಡಿತ್ತು. ಇದೀಗ ಅಂದು ನಡೆದ ಘಟನೆಯ ವಿಡಿಯೋವನ್ನು ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ನಡೆಸಿಕೊಡುವ ಬಿಯಾಂಡ್23 ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗಿಯಾಗಿದ್ದ ಲಲಿತ್ ಮೋದಿ, ಹರ್ಭಜನ್, ಶ್ರೀಶಾಂತ್‌ಗೆ ಹೇಗೆ ಕಪಾಳಮೋಕ್ಷ ಮಾಡಿದರು ಎಂಬುದನ್ನು ವಿವರಿಸಿದ್ದಾರೆ. ‘ಉಭಯ ತಂಡಗಳ ನಡುವಿನ ಪಂದ್ಯ ಮುಗಿದಿತ್ತು, ಕ್ಯಾಮೆರಾಗಳು ಸಹ ಆಫ್ ಆಗಿದ್ದವು. ಆದರೆ, ನನ್ನ ಭದ್ರತಾ ಕ್ಯಾಮೆರಾ ಆನ್ ಆಗಿತ್ತು, ಈ ಸಮಯದಲ್ಲಿ ಏನೆಲ್ಲ ನಡೆದಿತ್ತೋ ಅದರ ವೀಡಿಯೊ ತೆಗೆಯಲಾಗಿತ್ತು. ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದರು. ಅಷ್ಟರಲ್ಲಿ, ಹರ್ಭಜನ್ ಸಿಂಗ್, ಶ್ರೀಶಾಂತ್ ಬಳಿಗೆ ಬಂದು ಅವರಿಗೆ ಕಪಾಳಮೋಕ್ಷ ಮಾಡಿದರು. ಆರಂಭದಲ್ಲಿ ಇಲ್ಲಿ ಏನು ನಡೆಯುತ್ತಿದೆ ಎಂಬುದು ಶ್ರೀಶಾಂತ್‌ಗೆ ಅರ್ಥವಾಗಲಿಲ್ಲ. ನಂತರ ಹರ್ಭಜನ್ ಸಿಂಗ್ ಮತ್ತೆ ಅವರ ಬಳಿಗೆ ಬಂದರು. ಅಷ್ಟರಲ್ಲಿ ಶ್ರೀಶಾಂತ್ ಬಳಿಗೆ ಬಂದ ಇರ್ಫಾನ್ ಪಠಾಣ್ ಮತ್ತು ಮಹೇಲ ಜಯವರ್ಧನೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಳೆದ 17 ವರ್ಷಗಳಿಂದ ನಾನು ಈ ವೀಡಿಯೊವನ್ನು ಎಲ್ಲಿಯೂ ಹಂಚಿಕೊಂಡಿರಲಿಲ್ಲ’ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 29, 2025 04:34 PM